
ತುಮಕೂರು, ಏ. ೪- ತಾಲ್ಲೂಕಿನ ಹರಳೂರು ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಏ. ೭ ರಿಂದ ಏ. ೧೩ ರ ವರಗೆ ನಡೆಯಲಿದೆ.
ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿ (ರಿ), ಶ್ರೀ ವೀರಭದ್ರೇಶ್ವರ ದಾಸೋಹ ಟ್ರಸ್ಟ್ (ರಿ), ಸಮುದಾಯ ಭವನ ನಿರ್ಮಾಣ ಸಮಿತಿ ಹರಳೂರು ಮತ್ತು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹಮ್ಮಿಕೊಂಡಿರುವ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಏಪ್ರಿಲ್ ೭ ರಂದು ರಾತ್ರಿ ೭.೩೦ ಕ್ಕೆ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುತ್ಥಳಿ ಮೆರವಣಿಗೆಗೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಲಿದ್ದಾರೆ. ರಾತ್ರಿ ೧೦ ಗಂಟೆಗೆ ವೀರಭದ್ರಸ್ವಾಮಿಗೆ ಆರತಿ ಅಗ್ನಿಕೊಂಡೋತ್ಸವ ನಡೆಯಲಿದೆ.
ಏ. ೮ ರಂದು ಬೆಳಿಗ್ಗೆ ದ್ವಜಾರೋಹಣ, ಕಳಸ ಸ್ಥಾಪನೆ ನಡೆಯಲಿದ್ದು, ನಂದಿ ವಾಹನ, ಗಜವಾಹನ ಸೇವೆ ಸಹ ಜರುಗಲಿದೆ.
ಏ. ೯ ರಂದು ಮಧ್ಯಾಹ್ನ ೧ ಗಂಟೆಗೆ ಸರಿಯಾಗಿ ಶ್ರೀ ವೀರಭದ್ರಸ್ವಾಮಿಯ ಮಹಾ ರಥೋತ್ಸವ ನೆರವೇರಲಿದೆ. ರಥೋತ್ಸವದ ಅಂಗವಾಗಿ ಹೂವಿನ ಅಲಂಕಾರ, ಧೂಳೋತ್ಸವ, ಪುಷ್ಪಾಲಂಕಾರ, ಪಾನಕ ಸೇವೆ ನಡೆಯಲಿದ್ದು, ಸಂಜೆ ೮ ಗಂಟೆಗೆ ಶ್ರೀ ವೀರಭದ್ರಸ್ವಾಮಿ ನಾಟಕ ಮಂಡಳಿ ವತಿಯಿಂದ ಐತಿಹಾಸಿಕ ಕುರುಕ್ಷೇತ್ರ ನಾಟಕದ ಪ್ರದರ್ಶನವಿರುತ್ತದೆ. ರಾತ್ರಿ ೮.೩೦ಕ್ಕೆ ಸಿಂಹ ವಾಹನೋತ್ಸವ, ನವಿಲು ವಾಹನ, ಬೆಳ್ಳಿ ಪಲ್ಲಕ್ಕಿ ಉತ್ಸವ, ನಂದಿವಾಹನ ಸೇವೆಗಳು ನಡೆಯಲಿವೆ.
ಏ. ೧೦ ರಂದು ರಾತ್ರಿ ನಂದಿ ವಾಹನ ಸೇವೆ ಜರುಗಲಿದೆ. ಏ. ೧೧ ರಂದು ರಾತ್ರಿ ೮ ಗಂಟೆಗೆ ಶ್ರೀ ಚನ್ನಿಗರಾಯ ಸ್ವಾಮಿಗೆ ಬೆಲ್ಲದ ಆರತಿ ಸೇವೆ, ರಾತ್ರಿ ೧೦ ಗಂಟೆಗೆ ಪ್ರಸಿದ್ಧ ಅಕ್ಕಿಪೂಜಾ ಅಲಂಕಾರ, ಪಲ್ಲಕ್ಕಿ ಉತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ.
ಏ. ೧೨ ರಂದು ತಿರುಗಣಿ ಉತ್ಸವ, ಏ. ೧೩ ರಂದು ರಾತ್ರಿ ನಡೆಯುವ ಓಕುಳಿ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಹರಳೂರು ಜಂಗಮಮಠದ ಶ್ರೀ ಚನ್ನಬಸವಸ್ವಾಮೀಜಿ ಯವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ವೀರಭದ್ರಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಸಮಿತಿ ಮನವಿ ಮಾಡಿದೆ.


























