
ಕಲಬುರಗಿ : ಮೇ.5:ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಸೋಂಕುಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್‍ಗಳ ಹರಡುವಿಕೆಯನ್ನು ತಡೆಯುವ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಇದು ಅತಿಸಾರ, ಉಸಿರಾಟದ ಸೋಂಕುಗಳು, ಸಾಂಕ್ರಾಮಿಕ ಕಾಯಿಲೆಗಳನ್ನು ಬರದಂತೆ ತಡೆಗಟ್ಟಲು ಸಾಧ್ಯವಿದೆ ಎಂದು ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ಬಸವಗಂಗಾ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ಕೈ ಸ್ವಚ್ಛತೆ ದಿನಾಚರಣೆ” ಯಲ್ಲಿ ಅವರು ಮಾತನಾಡುತ್ತಿದ್ದರು. ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಚೆನ್ನಾಗಿ ತೊಳೆಯುವುದು ಆರೋಗ್ಯಕರ ಜೀವನಕ್ಕೆ ಅಡಿಪಾಯವಾಗಿದೆ. ಇದು ಸೋಂಕುಗಳ ತಡೆಗಟ್ಟುವಿಕೆ, ಅನಾರೋಗ್ಯದಿಂದ ರಕ್ಷಣೆ, ರೋಗಾಣುಗಳ ಹರಡುವಿಕೆ ಕಡಿಮೆ ಮಾಡುತ್ತದೆ. ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು ಅನಾರೋಗ್ಯದಿಂದ ದೂರವಿರಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂದರು.
ಕೈಗಳನ್ನು ಆಹಾರ ತಯಾರಿಸುವ ಮೊದಲು, ಸಮಯದಲ್ಲಿ ಮತ್ತು ನಂತರ, ಆಹಾರವನ್ನು ಸೇವಿಸುವ ಮೊದಲು, ಶೌಚಾಲಯವನ್ನು ಬಳಸಿದ ನಂತರ,ಕಸವನ್ನು ಮುಟ್ಟಿದ ನಂತರ, ಪ್ರಾಣಿಗಳು ಅಥವಾ ಪ್ರಾಣಿಗಳ ತ್ಯಾಜ್ಯವನ್ನು ಮುಟ್ಟಿದ ನಂತರ,ಕೆಮ್ಮು, ಸೀನು ಅಥವಾ ಮೂಗು ಒರೆಸಿದ ನಂತರ ಸರಿಯಾದ ರೀತಿಯಲ್ಲಿ ಕೈ ತೊಳೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಸದಸ್ಯರಾದ ಅಸ್ಲಾಂ ಶೇಖ್, ದತ್ತು ಹಡಪದ ಸೇರಿದಂತೆ ಇನ್ನಿತರರಿದ್ದರು.






















