Home ಮುಖಪುಟ ಸುದ್ದಿ ಬಳಕೆಯಾಗದ ’ನೈಸ್’ ಭೂಮಿ ಬಿಡದಿ ಟೌನ್‌ಶಿಪ್‌ಗೆ ಬಳಸಲು ಸರ್ಕಾರಕ್ಕೆ ರಾಜ್ಯಪಾಲರ ಅಭಯ

ಬಳಕೆಯಾಗದ ’ನೈಸ್’ ಭೂಮಿ ಬಿಡದಿ ಟೌನ್‌ಶಿಪ್‌ಗೆ ಬಳಸಲು ಸರ್ಕಾರಕ್ಕೆ ರಾಜ್ಯಪಾಲರ ಅಭಯ

ಬೆಂಗಳೂರು,ಆ.೧೫-ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಡಿ ನೀಡಲಾಗಿರುವ ಪೈಕಿ ಬಳಕೆಯಾಗದೆ ಉಳಿದಿರುವ ಸರ್ಕಾರಿ ಭೂಮಿಯನ್ನು ಹಿಂಪಡೆದು, ಉದ್ದೇಶಿತ ’ಬಿಡದಿ ಟೌನ್‌ಶಿಪ್’ ಯೋಜನೆಗೆ ಬಳಸಿಕೊಳ್ಳುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಇದರಿಂದಾಗಿ ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಹಾಗೂ ಬೈರಮಂಗಲ-ಕುಂಚಾಗರನಹಳ್ಳಿ ಪಂಚಾಯಿತಿಗಳ ರೈತ ಹಿತರಕ್ಷಣಾ ಸಮಿತಿಗಳು ನೀಡಿದ ಮನವಿಯನ್ನು ಉಲ್ಲೇಖಿಸಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಆಗಸ್ಟ್ ೧೩ ರಂದು ಪತ್ರ ಬರೆದಿದ್ದಾರೆ.

ನೈಸ್ ಯೋಜನೆಗಾಗಿ ನೀಡಲಾದ ಜಮೀನಿನಲ್ಲಿ ರಿಂಗ್ ರಸ್ತೆ, ಲಿಂಕ್ ರಸ್ತೆ ಮತ್ತಿತರ ಕಾಮಗಾರಿಗಳಿಗೆ ಕೇವಲ ೩೭೬ ಎಕರೆ ಮಾತ್ರ ಬಳಕೆಯಾಗಿದೆ. ಉಳಿದ ಸುಮಾರು ೬,೭೫೭ ಎಕರೆ ಸರ್ಕಾರಿ ಜಮೀನು ಬಳಕೆಯಾಗದೆ ನೈಸ್ ಅಥವಾ ಇತರ ಖಾಸಗಿ ಸಂಸ್ಥೆಗಳ ಅಕ್ರಮ/ಅನಧಿಕೃತ ವಶದಲ್ಲಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಬಿಡದಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗಾಗಿ ೯ ಗ್ರಾಮಗಳ ವ್ಯಾಪ್ತಿಯ ಸುಮಾರು ೭,೪೩೧ ಎಕರೆ ಭೂಮಿ ಸ್ವಾಧೀನಕ್ಕೆ ಪ್ರಕ್ರಿಯೆ ನಡೆಯುತ್ತಿದೆ.೫ ಲಕ್ಷಕ್ಕೂ ಹೆಚ್ಚು ಹಣ್ಣಿನ ಗಿಡಗಳು, ೮೪೦ ಎಕರೆ ಭೂಮಿ, ೫೦೧ ಎಕರೆ ಹಿಪ್ಪುನೇರಳೆ (ರೇಷ್ಮೆ) ಬೇಸಾಯ ಹಾಗೂ ಲಕ್ಷಾಂತರ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ ವಲಯ ನಾಶವಾಗುವುದನ್ನು ತಪ್ಪಿಸಬಹುದು.
ಸಾವಿರಾರು ರೈತ ಕುಟುಂಬಗಳ ಸ್ಥಳಾಂತರ ಹಾಗೂ ಸಂಕಷ್ಟವನ್ನು ಮಿತಿಗೊಳಿಸಬಹುದು.ಸರ್ಕಾರಕ್ಕೆ ಭೂಸ್ವಾಧೀನದ ಕೋಟ್ಯಂತರ ರೂಪಾಯಿ ವೆಚ್ಚ ಹಾಗೂ ಕಾನೂನು ಸಂಘರ್ಷವೂ ಕಡಿಮೆಯಾಗಲಿದೆ.

ಹೈಕೋರ್ಟ್‌ರಾಜ್ಯಪಾಲರು ತಮ್ಮ ಪತ್ರದಲ್ಲಿ ಜನವರಿ ೯ ಮತ್ತು ಜುಲೈ ೨೯ ರ ಹೈಕೋರ್ಟ್ ಆದೇಶಗಳನ್ನು ಉಲ್ಲೇಖಿಸಿದ್ದಾರೆ.ಜುಲೈ ೨೯ ರ ಆದೇಶದಲ್ಲಿ ಹೈಕೋರ್ಟ್, “ನೈಸ್ (ಃಒIಅ) ಯೋಜನೆ ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ರೈತರಿಂದ ಭೂಮಿ ಕಸಿದುಕೊಳ್ಳಲಾಗಿದೆಯೇ ಹೊರತು ಇದರಲ್ಲಿ ’ನೈಸ್’ (ಒಳ್ಳೆಯದು) ಯಾವುದೂ ಇಲ್ಲ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಈ ಯೋಜನೆಯ ಅಕ್ರಮಗಳ ಕುರಿತು ಸ್ವತಂತ್ರ ತಜ್ಞರ ತಂಡದಿಂದ ’ಫೊರೆನ್ಸಿಕ್ ಆಡಿಟ್’ (ವಿಧಿವಿಜ್ಞಾನ ಲೆಕ್ಕಪರಿಶೋಧನೆ) ನಡೆಸಲು ಇದು ಸೂಕ್ತ ಪ್ರಕರಣ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.

ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ಗೆಹ್ಲೋಟ್ ಅವರು, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಂಡು, ಶೀಘ್ರವೇ ’ಕೈಗೊಂಡ ಕ್ರಮಗಳ ವರದಿ’ ಯನ್ನು ತಮಗೆ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶಿಸಿದ್ದಾರೆ.