Home ಮುಖಪುಟ ಸುದ್ದಿ ಮಹಿಳೆಯರಿಗೆ ಶೇ.೩೩ ಮೀಸಲಾತಿಗೆ ಕರೆ ೮೦ನೇ ಸ್ವಾತಂತ್ರೋತ್ಸವ: ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ

ಮಹಿಳೆಯರಿಗೆ ಶೇ.೩೩ ಮೀಸಲಾತಿಗೆ ಕರೆ ೮೦ನೇ ಸ್ವಾತಂತ್ರೋತ್ಸವ: ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ

ಹೊಸದೆಹಲಿ,ಆ.೧೫:ಲೋಕಸಭೆ ಹಾಗೂ ರಾಜ್ಯಗಳ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ರಷ್ಟು ಪ್ರಾತಿನಿಧ್ಯವನ್ನು ಶೀಘ್ರವಾಗಿ ಒದಗಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟನಿಂದ ಬದ್ಧತೆ ತೋರುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ನೀಡಿದ ಮಹಾತ್ಮ ಗಾಂಧೀಜಿ ಸೇರಿದಂತೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಅವರು, ದೇಶದ ೧೪೦ ಕೋಟಿ ಜನತೆಗೆ ಸ್ವಾತಂತ್ರ್ಯ ದಿನೋತ್ಸಾಹದ ಶುಭಾಶಯ ಕೋರಿದ ನಂತರ ಭಾರತದ ೮೦ನೇ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬುರುಜಿನಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸ್ಥಳೀಯ ಆಡಳಿತ ಸಂಸ್ಥೆಗಳಾದ ಪಂಚಾಯತ್, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಮಹಿಳೆಯರು ನೀಡುತ್ತಿರುವ ಅತ್ಯುತ್ತಮ ನಾಯಕತ್ವವನ್ನು ಸ್ಮರಿಸಿದ ಪ್ರಧಾನಿಯವರು, ‘ನಾರಿ ಶಕ್ತಿ ವಂದನ್ ಅಧಿನಿಯಮ’ದ ಪ್ರಮುಖ ಉದ್ದೇಶವನ್ನು ವಿವರಿಸಿದರು. “ಕಳೆದ ೪೦ ವರ್ಷಗಳಿಂದ ಮಹಿಳಾ ಮೀಸಲಾತಿ ವಿಷಯವು ರಾಜಕೀಯ ಮೇಲಾಟಗಳು ಮತ್ತು ವಿವಾದಗಳಿಗೆ ಬಲಿಯಾಗುತ್ತಾ ಬಂದಿದೆ. ಆದರೆ, ಈಗ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅವರ ಹಕ್ಕನ್ನು ನೀಡುವ ಸಮಯ ಬಂದಿದೆ,” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

“ಇಂದು ತ್ರಿವರ್ಣ ಧ್ವಜದ ನೆರಳಿನಲ್ಲಿ ನಿಂತು ದೇಶದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ನಾನು ವಿನಂತಿಸಿಕೊಳ್ಳುತ್ತಿದ್ದೇನೆನಮ್ಮ ಮಹಿಳೆಯರ ಸಾಮರ್ಥ್ಯ ಮತ್ತು ಶಕ್ತಿಯನ್ನು ಗೌರವಿಸಿ. ಶಾಸನಸಭೆ ಹಾಗೂ ಲೋಕಸಭೆಗಳಲ್ಲಿ ಅವರಿಗೆ ಶೇ. ೩೩ರಷ್ಟು ಪ್ರಾತಿನಿಧ್ಯ ಸಿಗುವಂತೆ ಮಾಡಿ, ದೇಶದ ನೀತಿ ನಿರೂಪಣೆಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಿ. ಪ್ರಧಾನಿ ಹೇಳಿದರು.

ಸಂಸತ್ತಿನಲ್ಲಿ ಈಗಾಗಲೇ ಅಂಗೀಕರಿಸಲ್ಪಟ್ಟಿರುವ ’ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಎಲ್ಲಾ ಪಕ್ಷಗಳು ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಬಾರಿಯ ಆಚರಣೆಯು ’ವಂದೇ ಮಾತರಂ’ ಗೀತೆಯ ೧೫೦ನೇ ವರ್ಷಾಚರಣೆಯ ಸಂಭ್ರಮಕ್ಕೂ ಸಾಕ್ಷಿಯಾಯಿತು. ರಾಷ್ಟ್ರಗೀತೆಗೂ ಮುನ್ನ ಕೆಂಪುಕೋಟೆಯಲ್ಲಿ ಪ್ರಥಮ ಬಾರಿಗೆ ’ವಂದೇ ಮಾತರಂ’ ಗೀತೆಯನ್ನು ಸೇನಾ ವಾದ್ಯಮೇಳದೊಂದಿಗೆ ಸಂಪೂರ್ಣವಾಗಿ ನುಡಿಸಲಾಯಿತು.

ಇಂದು ಭಾರತದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬ ಅಮರ ಶೂರರಿಗೆ ಶಿರಬಾಗಿ ನಮಿಸುತ್ತೇನೆ. ಈ ವರ್ಷ ನಮಗೆ ಅತ್ಯಂತ ವಿಶೇಷವಾದುದು, ಏಕೆಂದರೆ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷಗಳು ತುಂಬುತ್ತಿವೆ. ಈ ಗೀತೆ ನಮ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕ್ರಾಂತಿಕಾರಿ ಚೈತನ್ಯ ನೀಡಿದೆ.”

ಆತ್ಮನಿರ್ಭರ ಭಾರತ ಹಾಗೂ ಸೆಮಿಕಂಡಕ್ಟರ್ ಮಿಷನ್
“ಭಾರತವು ಇನ್ಮುಂದೆ ಯಾವುದೇ ತಂತ್ರಜ್ಞಾನ ಅಥವಾ ಸಾಮಗ್ರಿಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ. ಇಂದು ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತವು ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ನಮ್ಮ ಯುವಕರ ಸಾಮರ್ಥ್ಯ ಮತ್ತು ದೇಶೀಯವಾಗಿ ನಿರ್ಮಿಸಲಾಗುತ್ತಿರುವ ಸೆಮಿಕಂಡಕ್ಟರ್ ಘಟಕಗಳು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುತ್ತಿವೆ. ಕಾಗದದಿಂದ ಹಿಡಿದು ಕಂಪ್ಯೂಟರ್ ಚಿಪ್‌ಗಳವರೆಗೆ ಪ್ರತಿಯೊಂದರಲ್ಲೂ ಭಾರತ ಆತ್ಮನಿರ್ಭರವಾಗಬೇಕು.”

ವಿಕಸಿತ ಭಾರತ @೨೦೪೭’ ಮತ್ತು ಬಡತನ ನಿರ್ಮೂಲನೆ
“ಕಳೆದ ಒಂದು ದಶಕದಲ್ಲಿ ಭಾರತ ಸಾಧಿಸಿದ ಪ್ರಗತಿ ಅಸಮಾನವಾದದ್ದು. ಕಳೆದ ೧೨ ವರ್ಷಗಳಲ್ಲಿ ಕೈಗೊಂಡ ಕ್ರಾಂತಿಕಾರಿ ಯೋಜನೆಯಿಂದಾಗಿ ದೇಶದ ೨೫ ಕೋಟಿಗೂ ಹೆಚ್ಚು ಜನರು ಬಡತನದ ರೇಖೆಯಿಂದ ಹೊರಬಂದಿದ್ದಾರೆ. ನಮ್ಮ ಕಲ್ಪನೆಗಳು ಮತ್ತು ಕನಸುಗಳು ದೊಡ್ಡದಾಗಿದ್ದಷ್ಟು, ನಮ್ಮ ಸಾಮರ್ಥ್ಯವೂ ಬೆಳೆಯುತ್ತದೆ. ೨೦೪೭ರ ವೇಳೆಗೆ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರ (‘ವಿಕಸಿತ ಭಾರತ’) ಆಗುವುದು ನಿಶ್ಚಿತ.”

೧ ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ ತರಬೇತಿ
ದೇಶದ ಯುವಜನತೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಭಾರಿ ಕೊಡುಗೆ ನೀಡಿದ್ದಾರೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ‘ಉಚಿತ ಆನ್‌ಲೈನ್ ಕೋಚಿಂಗ್’ ವ್ಯವಸ್ಥೆ ಹಾಗೂ ಮುಂದಿನ ಒಂದು ವರ್ಷದಲ್ಲಿ ೧ ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (ಂI) ತರಬೇತಿ ನೀಡುವ ಬೃಹತ್ ಯೋಜನೆಯನ್ನು ಪ್ರಕಟಿಸಿದ್ದಾರೆ.

ಇಂಧನ ಭದ್ರತೆ ಮತ್ತು ನಿರ್ಣಾಯಕ ಖನಿಜಗಳು
“ಭವಿಷ್ಯದ ಜಗತ್ತನ್ನು ಆಳಲಿರುವುದು ಇಂಧನ ಭದ್ರತೆ ಹಾಗೂ ನಿರ್ಣಾಯಕ ಖನಿಜ ಸಂಪನ್ಮೂಲಗಳು. ಹಸಿರು ಇಂಧನ, ಹೈಡ್ರೋಜನ್ ಮಿಷನ್ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ಮುಂಚೂಣಿಯಲ್ಲಿದೆ. ನಮ್ಮ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಹಾಗೂ ಇಂಧನ-ಸ್ವಾವಲಂಬಿ ಭಾರತವನ್ನು ಹಸ್ತಾಂತರಿಸುವುದು ನಮ್ಮ ಗುರಿಯಾಗಿದೆ.”

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಆಸರೆ
“ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ಪ್ರದೇಶಗಳಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಮಳೆ ಮತ್ತು ಪ್ರವಾಹದಿಂದ ತೊಂದರೆಗೊಳಗಾದ ಕುಟುಂಬಗಳೊಂದಿಗೆ ಇಡೀ ದೇಶವೇ ನಿಂತಿದೆ. ಕೇಂದ್ರ ಸರ್ಕಾರವು ಬಾಧಿತ ಜನರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಪರಿಹಾರ ಒದಗಿಸಲು ಬದ್ಧವಾಗಿದೆ.”

ಸ್ವಾತಂತ್ರ್ಯೋತ್ವಸವದ ವಿಶೇಷ ಕಾರ್ಯಕ್ರಮಗಳು
ವಿಶೇಷ ಉಡುಗೆ: ಪ್ರಧಾನಿ ಮೋದಿ ಅವರು ಈ ಬಾರಿಯ ಭಾಷಣಕ್ಕೆ ಕೆಂಪು ಬಣ್ಣದ ಸಾಂಪ್ರದಾಯಿಕ ’ಟೈ ಅಂಡ್ ಡೈ’ ಶೈಲಿಯ ಪಟಗ (ತಲೈಪಾ) ಧರಿಸಿ ಆಗಮಿಸಿದ್ದರು.ಕೆಂಪುಕೋಟೆಗೆ ಆಗಮಿಸುವ ಮೊದಲು ಪ್ರಧಾನಿಯವರು ದೆಹಲಿಯ ಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ, ಇಸ್ರೇಲ್ ಮತ್ತು ಇರಾನ್ ರಾಯಭಾರಿಗಳು ಭಾರತಕ್ಕೆ ಶುಭಾಶಯ ಕೋರಿದ್ದಾರೆ.

*ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಕರೆ
*೧೫೦ ವರ್ಷಗಳ ’ವಂದೇ ಮಾತರಂ’ ಸ್ಮರಣೆ:
*ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ಪೂರ್ಣ ವಂದೇ ಮಾತರಂ ಗೀತೆ
*ಸೆಮಿಕಂಡಕ್ಟರ್, ಇಂಧನ ಭದ್ರತೆ ಮತ್ತು ಆತ್ಮನಿರ್ಭರತೆಗೆ ವಿಶೇಷ ಒತ್ತು
*೨೦೪೭ರ ವೇಳೆಗೆ ’ವಿಕಸಿತ ಭಾರತ’ ನಿರ್ಮಾಣ ನಮ್ಮ ಜಂಟಿ ಸಂಕಲ್ಪ