
ಕಮಲನಗರ:ಏ.೨೨: ೧೨ನೇ ಶತಮಾನದಲ್ಲಿ ಕಾಯಕ ತತ್ವದ ಮೂಲಕ ಸಮಸಮಾಜ ನಿರ್ಮಿಸಿದ ಮಹಾನ್ ಜ್ಞಾನಿ ಬಸವಣ್ಣನವರು ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ತಿಳಿಸಿದರು.
ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಬೇಸಿಗೆ ತರಬೇತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಸಾರಿ ಮಾದರಿಯಾದರು. ಅವರ ತತ್ವ, ವಚನಗಳು ಸಾರ್ವಕಾಲಿಕ ಮೌಲ್ಯಗಳಾಗಿದ್ದು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಿರಾದಾರ ಮಾತನಾಡಿ, ೧೨ನೇ ಶತಮಾನ ತನ್ನದೇ ಆದ ಮಹತ್ವ ಪಡೆದಿದ್ದು, ಜಗಜ್ಯೋತಿ ಬಸವೇಶ್ವರರು ಸರಳ ವಚನಗಳ ಮೂಲಕ ಸಮಾಜದಲ್ಲಿರುವ ಅನಿಷ್ಟಗಳ ನಿರ್ಮೂಲನೆಗೆ ಪ್ರಯತ್ನಿಸಿದರು. ಎಲ್ಲ ವರ್ಗಗಳ ಜನರಲ್ಲಿ ಸಮಾನತೆ ತರಲು ಹಗಲಿರಲು ಶ್ರಮಿಸಿದ ಇವರ ಆದರ್ಶಗಳು ನಮಗೆಲ್ಲ ಅನುಕರಣೀಯ ಎಂದರು.
ಉಪಾಧ್ಯಕ್ಷ ಅಂಬಿಕಾ ಸಂಗಮೇಶ ಬಿರಾದಾರ, ಈಶ್ವರಿ ಮದನೂರು, ಪಾಲಕ ಪ್ರತಿನಿಧಿ ಇಸ್ಮೈಲ್, ಮಲ್ಲಿಕಾರ್ಜುನ ಮೇತ್ರೆ, ಕಂಟೆಪ್ಪ, ಚೇತನ, ಸೌಮ್ಯ, ಸುಮಂಗಳಾ ಸೇರಿದಂತೆ ಪ್ರಮುಖರು ಹಾಗೂ ತರಬೇತಿ ಮಕ್ಕಳು ಇದ್ದರು.






















