Home ಮುಖಪುಟ ಸುದ್ದಿ ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ: ಹರಿದು ಬಂದ ಭಕ್ತ ಗಣ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ: ಹರಿದು ಬಂದ ಭಕ್ತ ಗಣ

ಹಾಸನ, ನ. ೧೧-ಹಾಸನದ ಅಧಿದೇವತೆ, ಶಕ್ತಿ ಸ್ವರೂಪಿಣಿ ಹಾಸನಾಂಬೆ ದೇವಿಯ ದರ್ಶನೋತ್ಸವಕ್ಕೆ ಇಂದು ವಿಧ್ಯುಕ್ತ ತೆರೆ ಎಳೆಯಲಾಯಿತು.


ಇಂದು ಮಧ್ಯಾಹ್ನ ೧೨ ಗಂಟೆಯ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು.


ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ತಾಯಿಯ ದರ್ಶನ ಪಡೆಯಲು ಕೊನೆಯ ದಿನವಾದ ಇಂದು ದೇವಸ್ಥಾನದತ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಕೃಪೆಗೆ ಪಾತ್ರರಾದರು. ೩೦ ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ
ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ ೩೦ರಿಂದ ನವೆಂಬರ್ ೧೧ರ ಬೆಳಗ್ಗೆ ೬ ಗಂಟೆಯವರೆಗೆ ೩೦ ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಭಕ್ತರ ಸಂಖ್ಯೆಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.


ಹಾಸನಾಂಬೆ ದರ್ಶನೋತ್ಸವದಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯವೂ ಸಂಗ್ರಹವಾಗಿದೆ. ೧,೦೦೦ ರೂ. ಮತ್ತು ೩೦೦ ರೂ. ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟ ಸೇರಿದಂತೆ ಒಟ್ಟು ೨೫.೩೬ ಕೋಟಿ ರೂಪಾಯಿ ಆದಾಯ ಬಂದಿದೆ.


ಮುಂದಿನ ವರ್ಷದ ದರ್ಶನಕ್ಕಾಗಿ ಕಾಯಬೇಕು


ಹಾಸನಾಂಬೆ ದೇವಿಯ ದರ್ಶನೋತ್ಸವ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಕ್ತರಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ದೂರದ ಊರುಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದ ಭಕ್ತರು ತಾಯಿಯ ಆಶೀರ್ವಾದ ಪಡೆದು ತಮ್ಮ ಊರುಗಳತ್ತ ಮರಳುತ್ತಿದ್ದಾರೆ.


ಒಟ್ಟಿನಲ್ಲಿ, ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವ ಲಕ್ಷಾಂತರ ಭಕ್ತರ ಭಾಗವಹಿಸುವಿಕೆ ಹಾಗೂ ದಾಖಲೆ ಪ್ರಮಾಣದ ಆದಾಯದೊಂದಿಗೆ ಸಂಪನ್ನಗೊಳ್ಳುತ್ತಿದೆ. ಗರ್ಭಗುಡಿಯ ಬಾಗಿಲು ಮುಚ್ಚಿದ ಬಳಿಕ ಭಕ್ತರು ಮತ್ತೆ ಮುಂದಿನ ವರ್ಷದ ಜಾತ್ರಾ ಮಹೋತ್ಸವದವರೆಗೆ ಕಾಯಬೇಕಾಗಿದೆ.

ಕೊಂಡ ಹಾಯುವಾಗ ಸಂಸದ ಶ್ರೇಯಸ್ ಗೆ ಗಾಯ


ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ನಡೆದ ಸಿದ್ದೇಶ್ವರಸ್ವಾಮಿ ಕೆಂಡೋತ್ಸವದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಕೆಂಡದ ಮೇಲೆ ನಡೆಯುವಾಗ ಕೊನೆಯಲ್ಲಿ ಆಯತಪ್ಪಿ ಜಾರಿದ ಘಟನೆ ನಡೆದಿದೆ.


ಅದೃಷ್ಟವಶಾತ್, ಅವರ ಗನ್‌ಮೆನ್ ರಂಜನ್ ತಕ್ಷಣವೇ ಅವರನ್ನು ಹಿಡಿದು ಎತ್ತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇದೇ ವೇಳೆ ನೂರಾರು ಭಕ್ತರು ಕೆಂಡ ಹಾಯ್ದಿದ್ದು, ಹಾಸನ ಡಿವೈಎಸ್‌ಪಿ ಗಂಗಾಧರಪ್ಪ ಹಾಗೂ ಒಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕೂಡ ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ್ದಾರೆ.


ಕೆಂಡೋತ್ಸವದ ವೇಳೆ ದೇವರನ್ನ ಹೊತ್ತು ಭಕ್ತರು ಕೆಂಡ ಹಾಯುವಾಗ ಅಲ್ಲೇ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನ ಮೊಬೈಲ್ ಕೆಂಡದೊಳಗೆ ಬಿದ್ದಿದೆ. ತಕ್ಷಣವೇ ಮತ್ತೊಬ್ಬ ಭಕ್ತ ಕೆಂಡದಿಂದ ಮೊಬೈಲ್ ತೆಗೆದುಕೊಟ್ಟಿದ್ದಾನೆ. ಇದೇ ವೇಳೆ ಕೆಂಡದ ಮೇಲಿಂದ ಓಡುವಾಗ ಒಬ್ಬ ವ್ಯಕ್ತಿ ನೇರವಾಗಿ ಕೆಂಡದೊಳಗೆ ಬಿದ್ದಿದ್ದಾನೆ, ಕೂಡಲೇ ಸ್ಥಳದಲ್ಲಿದ್ದವರು ಆತನನ್ನು ಕೆಂಡದ ಕೊಂಡದಿಂದ ಹೊರಕ್ಕೆ ಎಳೆದುಕೊಂಡಿದ್ದಾರೆ. ಮತ್ತೊಂದೆಡೆ ಕೆಂಡ ಹಾಯ್ದು ಮುಗಿಸಿದ ತಕ್ಷಣ ಮಹಿಳೆಯೊಬ್ಬರು ಕೆಂಡದ ಕೊಂಡದ ಬಳಿಯೇ ಸುಸ್ತಾಗಿ ಬಿದ್ದಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಮೇಲೆತ್ತಿ ಉಪಚರಿಸಿದ್ದಾರೆ.