Home ಮುಖಪುಟ ಸುದ್ದಿ ಪಟಾಕಿ ಅವಘಡ ೧೫೦ ಮಂದಿಗೆ ಗಾಯ:ಗರ್ಭಿಣಿ ಸೇರಿ ೬ ಮಂದಿ ಆಸ್ಪತ್ರೆಗೆ ದಾಖಲು

ಪಟಾಕಿ ಅವಘಡ ೧೫೦ ಮಂದಿಗೆ ಗಾಯ:ಗರ್ಭಿಣಿ ಸೇರಿ ೬ ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ನ,೧೧- ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಹಲವರ ಬದುಕಿನಲ್ಲಿ ಕತ್ತಲು ಮೂಡಿಸಿವೆ. ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡವರ ಸಂಖ್ಯೆ ೧೫೦ರ ಗಡಿ ದಾಟಿದ್ದು, ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಮತ್ತೊಂದೆಡೆ, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗರ್ಭಿಣಿ ಸೇರಿದಂತೆ ಆರು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ:


ಪಟಾಕಿ ಸಿಡಿತದಿಂದ ಕಣ್ಣಿಗೆ ಗಂಭೀರ ಗಾಯಗೊಂಡ ಇಬ್ಬರಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಇಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಗಾಯಾಳುಗಳಲ್ಲಿ ೩೦ ವರ್ಷದ ಯುವಕನಿಗೆ ಕಣ್ಣಿನ ಹೊರಪದರವಾದ ಸ್ಕ್ಲೆರಾದಲ್ಲಿ ಹರಿತದ ಗಾಯ (Sಛಿಟeಡಿಚಿಟ ಖಿeಚಿಡಿ) ಉಂಟಾಗಿದೆ. ಬೆಂಗಳೂರಿನ ಅಶೋಕ್ ನಗರದ ನಿವಾಸಿಯಾಗಿರುವ ಈ ಯುವಕ, ಪಟಾಕಿ ಸಿಡಿತದ ವೇಳೆ ಪಕ್ಕದಲ್ಲಿದ್ದ ವ್ಯಕ್ತಿಯಾಗಿದ್ದು, ಸಿಡಿದ ಪಟಾಕಿಯಿಂದ ಕಣ್ಣಿಗೆ ಗಂಭೀರ ಗಾಯವಾಗಿದೆ.


ಯುವಕನ ಕಣ್ಣಿನ ಗಾಯವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ. ಆದರೆ, ಚಿಕಿತ್ಸೆಯ ಬಳಿಕವೂ ದೃಷ್ಟಿ ಮರಳುವ ಸಾಧ್ಯತೆ ಕುರಿತು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.


ಇನ್ನು ನಾಲ್ಕು ವರ್ಷದ ಬಾಲಕನಿಗೂ ಚಕ್ರಿ ಮತ್ತು ಬಿಜಿಲಿ ಪಟಾಕಿಯಿಂದ ಕಣ್ಣಿಗೆ ಗಂಭೀರ ಗಾಯವಾಗಿದೆ. ಉತ್ತರ ಪ್ರದೇಶ ಮೂಲದ ಈ ಬಾಲಕ, ಬೆಂಗಳೂರಿನ ಹೊಸಕೋಟೆಯಲ್ಲಿ ವಾಸವಾಗಿದ್ದಾನೆ. ಬಾಲಕನಿಗೆ ಕಣ್ಣಿನ ಲಿಂಬಲ್ ಭಾಗದಲ್ಲಿ ಹರಿತದ ಗಾಯದೊಂದಿಗೆ ಐರಿಸ್ ಹೊರಚಾಚಿರುವ ಸ್ಥಿತಿ ಕಂಡುಬಂದಿದ್ದು, ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗಿದೆ.


೧೫೦ರ ಗಡಿ ದಾಟಿದ ಕಣ್ಣಿನ ಗಾಯದ ಪ್ರಕರಣಗಳು;


ಬೆಂಗಳೂರಿನ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಾಗಿದೆ. ಆಸ್ಪತ್ರೆಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಪ್ರಕರಣಗಳ ವಿವರ ಹೀಗಿದೆ:
ನಾರಾಯಣ ನೇತ್ರಾಲಯ ೫೧
ಮಿಂಟೋ ಆಸ್ಪತ್ರೆ ೩೦
ಶಂಕರ ಕಣ್ಣಿನ ಆಸ್ಪತ್ರೆ ೨೬
ಪ್ರಭಾ ಕಣ್ಣಿನ ಆಸ್ಪತ್ರೆ ೧೫
ಬೆಂಗಳೂರು ನೇತ್ರಾಲಯ ೬
ಮೋದಿ ಕಣ್ಣಿನ ಆಸ್ಪತ್ರೆ ೫
ಅಗ್ರವಾಲ್ ಕಣ್ಣಿನ ಆಸ್ಪತ್ರೆ ೪
ಇತರೆ ಆಸ್ಪತ್ರೆಗಳು ೨೦ಕ್ಕೂ ಹೆಚ್ಚು
ಈ ಪೈಕಿ ಮಿಂಟೋ ಆಸ್ಪತ್ರೆಯ ಪ್ರಕರಣಗಳ ಸಂಖ್ಯೆ ೩೬ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಗರ್ಭಿಣಿ ಸೇರಿ ಆರು ಮಂದಿಗೆ ಗಾಯ:


ಇನ್ನೊಂದೆಡೆ, ಪಟಾಕಿ ಸಿಡಿತದಿಂದ ಗಾಯಗೊಂಡ ಆರು ಮಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳಲ್ಲಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರಿದ್ದಾರೆ. ೧೧, ೧೪ ಮತ್ತು ೯ ವರ್ಷದ ಮೂವರು ಬಾಲಕರು ಹಾಗೂ ೯ ವರ್ಷದ ಬಾಲಕಿ ಗಾಯಗೊಂಡಿದ್ದಾರೆ. ೨೧ ಮತ್ತು ೨೭ ವರ್ಷದ ಮಹಿಳೆಯರೂ ಪಟಾಕಿ ಅವಘಡಕ್ಕೆ ತುತ್ತಾಗಿದ್ದಾರೆ.


ಆರು ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳಿಗೂ ಪಟಾಕಿ ಸಿಡಿದು ಗಾಯಗಳಾಗಿವೆ.


ಇನ್ನೂ ಪಟಾಕಿ ಅವಘಡದಲ್ಲಿ ೨೧ ವರ್ಷದ ಗರ್ಭಿಣಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮಹಿಳೆ ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡಿದ್ದ ವೇಳೆ ಕಿಡಿ ತಗುಲಿ, ಬಾಕ್ಸ್‌ನಲ್ಲಿದ್ದ ಪಟಾಕಿಗಳೆಲ್ಲ ಒಮ್ಮೆಲೆ ಸಿಡಿದಿವೆ. ಪರಿಣಾಮ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇದಲ್ಲದೆ, ಪಟಾಕಿ ಸಿಡಿತದಿಂದ ಮೂವರು ಮಕ್ಕಳ ಮುಖದ ಚರ್ಮ ಸುಟ್ಟುಹೋಗಿದೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಮುಂದುವರಿದಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದ ಮುಖ್ಯಸ್ಥ ಡಾ. ಎನ್.ಎ. ಯೋಗೇಶ್ವರಪ್ಪ ಮಾಹಿತಿ ನೀಡಿದ್ದಾರೆ.


ಒಟ್ಟಿನಲ್ಲಿ, ಪಟಾಕಿ ಸಂಭ್ರಮದ ನಡುವೆ ಸಂಭವಿಸುತ್ತಿರುವ ಅವಘಡಗಳು ಆತಂಕ ಮೂಡಿಸಿದ್ದು, ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯವಾಗಿದೆ. ಕ್ಷಣಿಕ ಸಂಭ್ರಮಕ್ಕಾಗಿ ನಿರ್ಲಕ್ಷ್ಯ ವಹಿಸಿದರೆ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂಬುದನ್ನು ಈ ಘಟನೆಗಳು ಎಚ್ಚರಿಸಿವೆ.