
ಬೀದರ, ಏ 23: ಬೀದರ ನಗರದಲ್ಲಿ ಸೋಲಾರ್ ಅಳವಡಿಸದ ಹೊಸ ಮನೆಗಳಿಗೆ ನಿಯಮ ಬಾಹಿರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.
ನಗರದಲ್ಲಿ ಹೊಸ ಮನೆ ನಿರ್ಮಾಣ ಮಾಡುವವರಿಗೆ ಸೋಲಾರ್ ಅಳವಡಿಸುವುದು ಕಡ್ಡಾಯವಾಗಿದ್ದು, ಸೋಲಾರ್ ವ್ಯವಸ್ಥೆ ಅಳವಡಿಸಿದ ನಂತರವೇ ವಿದ್ಯುತ್ ಸಂಪರ್ಕ ನೀಡಬೇಕೆಂಬ ಸರ್ಕಾರಿ ನಿಯಮವಿದೆ. ಆದರೆ ಬೀದರ ನಗರದಲ್ಲಿ ಹಲವು ಹೊಸ ಮನೆಗಳಿಗೆ ಸೋಲಾರ್ ಅಳವಡಿಸದೇ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ಈ ಕುರಿತು ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರಿಗೆ ದೂರು ಸಲ್ಲಿಸಿದರೂ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಮಾಹಿತಿ ಹಕ್ಕು ಅಧಿನಿಯಮ 2005ರಡಿ ಜೆಸ್ಕಾಂ ಡಿ-1ರಿಂದ ಡಿ-7 ವರೆಗೆ ಬೀದರ ನಗರದಲ್ಲಿ ಎಷ್ಟು ಮನೆಗಳು ನಿರ್ಮಾಣಗೊಂಡಿವೆ, ಯಾವ ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ, ಅದರ ಆರ್.ಆರ್. ಸಂಖ್ಯೆಗಳ ಪಟ್ಟಿ ಹಾಗೂ ಭಾವಚಿತ್ರಗಳನ್ನು ನೀಡುವಂತೆ ಮಾಹಿತಿ ಕೇಳಲಾಗಿತ್ತು. ಆದರೆ ಕೇಳಿದ ಮಾಹಿತಿಯನ್ನು ನೀಡದೇ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕರವೇ ಆರೋಪಿಸಿದೆ.
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಏಪ್ರಿಲ್ 24, 2026ರಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ (ವಿ) ಜೆಸ್ಕಾಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಚರಣಜೀತ ಆಣದೂರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















