
ಕಲಬುರಗಿ:ಜೀವನದ ನಿಜವಾದ ಅರ್ಥವನ್ನು ಅರಿಯಲು, ಮಾನವೀಯತೆಯ ಮೌಲ್ಯವನ್ನು ಸ್ಮರಿಸಲು ಮತ್ತು ಹಿರಿಯರ ಆಶೀರ್ವಾದವನ್ನು ಪಡೆಯಲು ಕೂಡಿದ್ದೇವೆ ಎಂದು ಬೆಳಗುಂಪಿಯ ಪೂಜ್ಯರಾದ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಹೇಳಿದರು.
ನಗರದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ವ್ರದ್ಧಾಶ್ರಮದಲ್ಲಿ ಜ್ಞಾನ ಶಿಕ್ಷಣ ಸಂಸ್ಥೆ ವತಿಯಿಂದ “ಹಿರಿಯರಿಗೆ ಗೌರವಿಸಿ, ಉತ್ತಮ ಸಮಾಜ ನಿರ್ಮಿಸಿ” ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ
ಮನುಷ್ಯನ ಜೀವನದಲ್ಲಿ ಹಣ, ಆಸ್ತಿ, ಅಂತಸ್ತು, ಅಧಿಕಾರ ಇವೆಲ್ಲವೂ ತಾತ್ಕಾಲಿಕ. ಆದರೆ ನಾವು ಹಂಚಿದ ಪ್ರೀತಿ, ಮಾಡಿದ ಸೇವೆ, ತೋರಿದ ಕರುಣೆ ಮತ್ತು ಗಳಿಸಿದ ಹೃದಯಗಳ ಆಶೀರ್ವಾದ ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಮಾರ್ಮಿಕವಾಗಿ ನುಡಿದರು. ಜ್ಞಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸಂಗಮೇಶ್ವರ ಸರಡಗಿ ಮಾತನಾಡುತ್ತ ಇಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಹಿರಿಯರ ಹಿಂದೆ ಒಂದೊಂದು ಅನುಭವದ ಕಥೆಯಿದೆ, ತ್ಯಾಗದ ಇತಿಹಾಸವಿದೆ, ಬದುಕಿನ ಪಾಠವಿದೆ. ಇವರು ಕೇವಲ ಹಿರಿಯರಲ್ಲ,ನಮ್ಮ ಸಂಸ್ಕೃತಿಯ ಜೀವಂತ ವಿಶ್ವವಿದ್ಯಾಲಯಗಳು.
ನಾವು ದೇವರನ್ನು ದೇವಸ್ಥಾನದಲ್ಲಿ ಹುಡುಕುತ್ತೇವೆ. ಆದರೆ ಹಸಿದವರಿಗೆ ಅನ್ನ ನೀಡುವಾಗ, ನೋವಿನಲ್ಲಿರುವವರಿಗೆ ಸಾಂತ್ವನ ಹೇಳುವಾಗ, ಅನಾಥ ಭಾವನೆಯಲ್ಲಿರುವ ಹಿರಿಯರಿಗೆ ಪ್ರೀತಿ ನೀಡುವಾಗ ದೇವರನ್ನು ಕಾಣಬಹುದು ಎಂದು ಹೇಳಿದರು. ಶಿಕ್ಷಕರಾದ ಶಿವಕಾಂತ ಚಿಮ್ಮಾ ಮಾತನಾಡುತ್ತ ಹಿರಿಯರ ಕಣ್ಣೀರನ್ನು ಒರೆಸುವ ಕೈಗಳು ದೇವರ ಸೇವೆ ಮಾಡುತ್ತವೆ. ಹಿರಿಯರ ಮುಖದಲ್ಲಿ ನಗು ಮೂಡಿಸುವ ಹೃದಯ ನಿಜವಾದ ಪುಣ್ಯವನ್ನು ಸಂಪಾದಿಸುತ್ತದೆ ಎಂದು ಹೇಳಿದರು.ಬಾಲಕೃಷ್ಣ ಕುಲಕರ್ಣಿ, ಬಸಮ್ಮ ಸ್ಥಾವರಮಠ ವೇದಿಕೆಯ ಮೇಲಿದ್ದರು. ಶಿವರಾಜ ಬೀರಬಿಟ್ಟೆ ಪ್ರಾರ್ಥಿಸಿದರು.
ಮಲ್ಲಿನಾಥ ಮುನ್ನೊಳ್ಳಿ ಸ್ವಾಗತಿಸಿದರು. ವಿರೇಶ ಬೋಳಶೆಟ್ಟಿ ನಿರೂಪಿಸಿದರು.ಸಮಾಜ ಸೇವಕರಾದ ಸಂಜೀವಕುಮಾರ ಶೆಟ್ಟಿ ವಂದಿಸಿದರು. ಇದೆ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಸಂಗಮೇಶ್ವರ ಸರಡಗಿ ಅವರಿಗೆ ಗೆಳೆಯರ ಬಳಗದ ವತಿಯಿಂದ ಸತ್ಕರಿಸಲಾಯಿತು.ವ್ರದ್ಧಾಶ್ರಮದಲ್ಲಿರುವ ಎಲ್ಲಾ ಹಿರಿಯರಿಗೆ ಉಡುಗೊರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸರೋಜಾ ಸರಡಗಿ, ಶರಣು ಕಲಶಟ್ಟಿ, ಶರಣು ಸರಡಗಿ, ಸುಶೀಲಬಾಯಿ ಸರಡಗಿ, ಬಸವರಾಜ ಸಲಗರ,
ಸಂಜೀವಕುಮಾರ ಸಲಗರ ಸೇರಿದಂತೆ ಕೆ ಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯ ಅನೇಕ ಜನ ಭಾಗವಹಿಸಿದರು























