Home ಜಿಲ್ಲೆ ಕಲಬುರಗಿ ಕೇಬಲ್ ವೈರ್ ಕಳ್ಳರ ಬಂಧನ

ಕೇಬಲ್ ವೈರ್ ಕಳ್ಳರ ಬಂಧನ

ಕಲಬುರಗಿ,ಅ.31-ಇಬ್ಬರು ಕೇಬಲ್ ವೈರ್ ಕಳ್ಳರನ್ನು ಬಂಧಿಸಿರುವ ದೇವಲಗಾಣಗಾಪುರ ಠಾಣೆ ಪೊಲೀಸರು 50 ಸಾವಿರ ರೂ.ಮೌಲ್ಯದ 1600 ಫೀಟ್ ಕೇಬಲ್ ಜಪ್ತಿ ಮಾಡಿದ್ದಾರೆ.
ದೇಸಾಯಿ ಕಲ್ಲೂರ ಗ್ರಾಮದ ಲಕ್ಷ್ಮಣ ತಂದೆ ಗುರಪ್ಪ ಅಂಡಗಿ ಮತ್ತು ಮಲ್ಲಪ್ಪ ತಂದೆ ಶಿವಗುಳ್ಳಪ್ಪ ಹಿಂಚಗೇರಿ ಎಂಬುವವರನ್ನು ಬಂಧಿಸಿ 50 ಸಾವಿರ ರೂ.ಮೌಲ್ಯದ 1600 ಫೀಟ್ ಕೇಬಲ್ ಜಪ್ತಿ ಮಾಡಿದ್ದಾರೆ.
ದೇವಲಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಘೋಳನೂರ ಗ್ರಾಮದಲ್ಲಿ ರೈತರು ಕರೆಂಟ್ ಮೋಟಾರ್ ಸ್ಟಾರ್ಟರ್‍ಗಳಿಗೆ ಅಳವಡಿಸಿದ್ದ 54 ಸಾವಿರ ರೂ.ಮೌಲ್ಯದ 1800 ಫೀಟ್ 3 ಎಳೆಯ ತಾಮ್ರದ ತಂತಿ ಇರುವ ಕೇಬಲ್ ವೈರ್ ಕಳ್ಳತನ ಮಾಡಲಾಗಿದೆ ಎಂದು ಯಲ್ಲಾಲಿಂಗ ಕಲ್ಲೂರ ಎಂಬುವವರು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ಆಳಂದ ಡಿಎಸ್‍ಪಿ ತಮ್ಮಾರಾಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಲಖನ್ ಆರ್ ಮಸಗುಪ್ಪಿ ಅವರ ನೇತೃತ್ವದಲ್ಲಿ ದೇವಲಗಾಣಗಾಪುರ ಪೊಲೀಸ್ ಠಾಣೆ ಪಿಎಸ್‍ಐಗಳಾದ ಕು.ಸಂಗೀತಾ ಶಿಂಧೆ, ಶ್ರೀದೇವಿ, ಸಿಬ್ಬಂದಿಗಳಾದ ಸಂಗಣ್ಣ, ಮಕ್ಕುಮ್ ಪಟೇಲ್, ಶಿವಯ್ಯ, ಅಣ್ಣಪ್ಪ, ಆನಂದ ಹಿರೇಮಠ, ಕಾಶಿನಾಥ, ಯಲ್ಲಪ್ಪ ಭಜಂತ್ರಿ ಮತ್ತು ಬಲರಾಮ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಕೇಬಲ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.