Home ಜಿಲ್ಲೆ ಕಲಬುರಗಿ ನೌಕರರ ಸಂಘದ ನಿವೇಶನಕ್ಕೆ ಸಮಾಜದ ಹೆಸರಿನ ಬಣ್ಣ ಬಳಿಯಬೇಡಿ: ದೇವೇಂದ್ರ ದೇಸಾಯಿ ವಾಗ್ದಾಳಿ

ನೌಕರರ ಸಂಘದ ನಿವೇಶನಕ್ಕೆ ಸಮಾಜದ ಹೆಸರಿನ ಬಣ್ಣ ಬಳಿಯಬೇಡಿ: ದೇವೇಂದ್ರ ದೇಸಾಯಿ ವಾಗ್ದಾಳಿ

ಕಲಬುರಗಿ,ಜು.11-ಕರ್ನಾಟಕ ವಿಶ್ವಕರ್ಮ ಮಹಾ ಒಕ್ಕೂಟದ ವತಿಯಿಂದ ವಿಶ್ವಕರ್ಮ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರಾಗಿದೆ ಎಂದು ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿರುವ ಕ್ರಮಕ್ಕೆ ವಿಶ್ವಕರ್ಮ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ಮಂಜೂರು ಮಾಡಿರುವ ನಿವೇಶನವು ವಿಶ್ವಕರ್ಮ ಸಮಾಜಕ್ಕೆ ಅಲ್ಲ. ಅದು ಕಲಬುರಗಿ ನಗರದ ಸಂತರಸ್‍ವಾಡಿಯಲ್ಲಿರುವ ವಿಶ್ವಕರ್ಮ ನೌಕರರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ನೀಡಲಾಗಿದೆ. ಹೀಗಿರುವಾಗ ಇಡೀ ವಿಶ್ವಕರ್ಮ ಸಮಾಜದ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿರುವುದು ಯಾವ ಅರ್ಥದಲ್ಲಿ ?” ಎಂದು ಪ್ರಶ್ನಿಸಿದರು.
ನೌಕರರ ಸಂಘಕ್ಕೆ ಮಂಜೂರಾದ ನಿವೇಶನವನ್ನು ವಿಶ್ವಕರ್ಮ ಸಮಾಜಕ್ಕೆ ನೀಡಿದಂತೆಯೇ ಬಿಂಬಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಸಮಾಜದ ಹೆಸರನ್ನು ಬಳಸಿಕೊಂಡು ಏಕಪಕ್ಷೀಯವಾಗಿ ಹೇಳಿಕೆ ನೀಡುವುದು ಸರಿಯಲ್ಲ ಬೇಕಾದರೆ ನಿಮ್ಮ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿ ಎಂದರು.
“ಈ ರೀತಿಯ ಹೇಳಿಕೆಗಳಿಗೆ ನಮ್ಮ ಸಂಪೂರ್ಣ ವಿರೋಧವಿದೆ. ವಿಶ್ವಕರ್ಮ ಸಮಾಜದ ಹೆಸರಿನಲ್ಲಿ ಯಾರೊಬ್ಬರೂ ಸ್ವಯಂಪ್ರೇರಿತವಾಗಿ ಮಾತನಾಡುವ ಅಧಿಕಾರ ಹೊಂದಿಲ್ಲ. ಸಮಾಜದ ಪರವಾಗಿ ಹೇಳಿಕೆ ನೀಡುವ ಮೊದಲು ಎಲ್ಲ ಸಂಘಟನೆಗಳು ಹಾಗೂ ಮುಖಂಡರ ಒಮ್ಮತ ಪಡೆಯಬೇಕು,” ಎಂದು ದೇವೇಂದ್ರ ದೇಸಾಯಿ ಕಲ್ಲೂರ ಹೇಳಿದರು.
ಅಲ್ಲದೆ, “ನಮ್ಮ ಸಮಾಜದ ಹಿರಿಯ ಮುಖಂಡರಿಗೆ ರಾಜ್ಯ ಸರ್ಕಾರ ಯಾವುದೇ ಮಹತ್ವದ ಸ್ಥಾನಮಾನ ನೀಡಿದರೆ ಅಥವಾ ಸಮಾಜದ ಮಹಾನ್ ಪುರುಷರು ಹಾಗೂ ಹೋರಾಟಗಾರರ ಪುತ್ಥಳಿಗಳನ್ನು ಸ್ಥಾಪಿಸಿದರೆ, ಅಂತಹ ಸಂದರ್ಭದಲ್ಲಿ ಇಡೀ ಸಮಾಜದ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸೋಣ. ಆದರೆ ನೌಕರರ ಸಂಘಕ್ಕೆ ನೀಡಿರುವ ನಿವೇಶನವನ್ನು ಇಡೀ ವಿಶ್ವಕರ್ಮ ಸಮಾಜಕ್ಕೆ ನೀಡಿದಂತೆ ಬಿಂಬಿಸಿ ಏಕಪಕ್ಷೀಯವಾಗಿ ಸಮಾಜವನ್ನು ಬಳಿಸಿಕೊಡಬೇಡಿ,” ಎಂದು ಎಚ್ಚರಿಕೆ ನೀಡಿದರು.
ಇಂತಹ ಏಕಪಕ್ಷೀಯ ನಿರ್ಧಾರಗಳು ಹಾಗೂ ಹೇಳಿಕೆಗಳಿಗೆ ಸಮಾಜದಿಂದ ತಿರುಗೇಟು ಸಿಗಲಿದೆ. ಇನ್ನು ಮುಂದೆ ಸಮಾಜದ ಹೆಸರಿನಲ್ಲಿ ಯಾವುದೇ ಹೇಳಿಕೆ ನೀಡುವ ಮುನ್ನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಂಬಂಧಪಟ್ಟವರಿಗೆ ದೇವೇಂದ್ರ ದೇಸಾಯಿ ಕಲ್ಲೂರ ಕಿವಿಮಾತು ಹೇಳಿದರು.