
ಮಾಲೂರು,ನ.೯- ಮಾಲೂರು ತಾಲೂಕಿನಾದ್ಯಂತ ಹಿಂದೂಗಳ ಸಾಂಪ್ರದಾಯಿಕ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಹಿಂದೂ ಧರ್ಮದವರ ಪಾಲಿಗೆ ಏಕಾದಶಿ ಹಬ್ಬಗಳ ಸರಣಿಯೊಂದಿಗೆ ಆರಂಭವಾಗುವ ಹಬ್ಬಗಳಲ್ಲಿ ದೀಪಾವಳಿ ಕೊನೆಯ ಹಬ್ಬವಾಗಿದ್ದು, ಇದಕ್ಕೆ ವಿಶೇಷ ಮಹತ್ವವಿದೆ. ಸಂಪ್ರದಾಯದಂತೆ ದೀಪಾವಳಿಯನ್ನು ಆಚರಿಸುವ ತಾಲ್ಲೂಕಿನ ಜನರಿಗೆ ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ನಡುವೆ ಇರುವ ದಿನ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ದೀಪಾವಳಿಯ ಮೊದಲ ದಿನವಾದ ನರಕ ಚತುರ್ದಶಿಯಂದು ಮಹಿಳೆಯರು ಕಜ್ಜಾಯ ತಯಾರಿಕೆಗೆ ಸಿದ್ಧತೆ ನಡೆಸಿದರು. ಅಮಾವಾಸ್ಯೆಯಂದು ಮನೆಮನೆಗಳಲ್ಲಿ ಬೆಲ್ಲದ ಪಾಕದೊಂದಿಗೆ ಕಜ್ಜಾಯ ತಯಾರಿಸಿ, ಕುಟುಂಬದ ಸಂಪ್ರದಾಯದಂತೆ ಹೊಸ ಪಾತ್ರೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಕಜ್ಜಾಯಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಹೊಸ ಬಟ್ಟೆ ಧರಿಸಿ ಗೌರಿ ಕಳಶಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.
ನಗರದ ಶಂಕರನಾರಾಯಣ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ ಹಾಗೂ ವೇಣುಗೋಪಾಲ ಸ್ವಾಮಿ ದೇವಾಲಯಗಳಲ್ಲಿ ಗೌರಿಯ ಸಮೇತ ಕಳಶ ಪ್ರತಿಷ್ಠಾಪಿಸಲಾಯಿತು. ಕಳಶದ ಮುಂದೆ ಕುಳಿತು ಪುರೋಹಿತರು ಕೇದಾರೇಶ್ವರ ವೇತ ಹಾಗೂ ಗೌರಿ ಪೂಜೆಯ ಮಹತ್ವವನ್ನು ವಿವರಿಸಿದರು. ನಂತರ ಭಕ್ತರು ಹಳೆಯ ನೋಮುದಾರಗಳನ್ನು ಹೊಸ ನೋಮುದಾರಗಳಿಗೆ ಬದಲಿಸಿ ಪೂಜೆ ಸಲ್ಲಿಸಿದರು. ಪೂಜೆಯ ನಂತರ ನೋಮುದಾರಗಳನ್ನು ಮನೆಗೆ ತೆಗೆದುಕೊಂಡು ಹೋಗಿ, ಕುಟುಂಬದ ಹಿರಿಯರಿಂದ ಕೈಗೆ ಕಟ್ಟಿಸಿಕೊಂಡರು. ಕೆಲವರು ದೇವಾಲಯ ಗಳಲ್ಲೇ ಹಿರಿಯರಿಂದ ನೋಮುದಾರಗಳನ್ನು ಕಟ್ಟಿಸಿಕೊಂಡರು.
ತಾಲ್ಲೂಕು ಆಡಳಿತ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಸೂಚನೆ ನೀಡಿದ್ದರೂ, ಹಲವೆಡೆ ವಿಭಿನ್ನ ಪಟಾಕಿಗಳ ಸದ್ದು ಮತ್ತು ದೀಪಗಳ ಬೆಳಕು ಹಬ್ಬದ ಸಂಭ್ರಮವನ್ನು ಹೆಚ್ಚಿಸಿತು. ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಗ್ರಾಮ ದೇವತೆ ಪಟಾಲಮ್ಮ ದೇವಿಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಮಹಿಳೆರು ಪಟಾಲಮ್ಮ ದೇವಿಗೆ ಹೂವು ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ವೈ. ನಂಜೇಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ನರಸಿಂಹ, ಮಾಜಿ ಶಾಸಕರಾದ ಕೆ.ಎಸ್. ಮಂಜುನಾಥ್ ಗೌಡ, ಎ. ನಾಗರಾಜು, ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್, ಜಿ.ಇ. ರಾಮೇಗೌಡ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡರು ಸೇರಿದಂತೆ ಅನೇಕ ಗಣ್ಯರು ತಾಲ್ಲೂಕಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.






















