Home ಜಿಲ್ಲೆ ಬೆಂಗಳೂರು ಮೂಡಾಚಾರದಿಂದ ವಂಚನೆ – ಹೈಕೋರ್ಟ್ ಕಳವಳ

ಮೂಡಾಚಾರದಿಂದ ವಂಚನೆ – ಹೈಕೋರ್ಟ್ ಕಳವಳ

ಬೆಂಗಳೂರು, ನ.೯- ಪ್ರಸ್ತುತ ಆಧುನಿಕ ಯುಗದಲ್ಲಿ ದೇವರು ಮೈಮೇಲೆ ಬರುತ್ತಾರೆ, ಪೂಜೆ ಮಾಡುವುದರಿಂದ ಕುಟುಂಬದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ನಂಬಿ ವಂಚನೆಗೆ ಒಳಗಾಗುವುದರ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.


ಕುಟುಂಬದ ಸಮಸ್ಯೆಗಳನ್ನು ನಿವಾರಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ೫ ಸ್ಥಿರ ಆಸ್ತಿಗಳು, ನೂರಾರು ಗ್ರಾಂ ಚಿನ್ನ ಹಾಗೂ ಕೋಟ್ಯಂತರ ರೂಪಾಯಿ ನಗದನ್ನು ಮಾಟಮಂತ್ರ ಮತ್ತು ಪೂಜೆಯ ಹೆಸರಿನಲ್ಲಿ ದೋಚಿರುವ ಗಂಭೀರ ಪ್ರಕರಣದಲ್ಲಿ ಪ್ರಮುಖ ಆರೋಪಿಯ ಪತ್ನಿ ಸೇರಿದಂತೆ ಇತರ ಇಬ್ಬರು ರಿಯಲ್? ಎಸ್ಟೇಟ್? ಏಜೆಂಟ್?ಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.


ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಲಕ್ಷ್ಮಮ್ಮ ಮತ್ತು ರಿಯಲ್ ಎಸ್ಟೇಟ್ ಏಜೆಂಟರಾದ ಪೆರುಮಾಳ್ ಹಾಗೂ ಹೊಸೂರು ಮಂಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.


ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನಿವಾಸಿ ಗೀತಾ ಹೆಚ್ ಎಂಬುವರ ಪತಿ ೨೦೦೯ರಲ್ಲಿ ನಿಧನರಾಗಿದ್ದರು. ಆ ಬಳಿಕ ಕುಟುಂಬದಲ್ಲಿ ಎದುರಾದ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಮೊದಲ ಆರೋಪಿ ನಾಗರಾಜ್ ಎಂಬುವರು ಮಹಿಳೆಯಗೆ ಪರಿಚಯವಾಗಿದ್ದ. ಪೂಜೆ ಮಾಡುವಾಗ ತನ್ನ ಮೈಮೇಲೆ ದೇವರು ಬರುತ್ತಾನೆ ಎಂದು ನಂಬಿಸಿ, ಸಂಕಷ್ಟ ನಿವಾರಣೆಯ ನೆಪದಲ್ಲಿ ಮಹಿಳೆಯ ಐದು ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಿಸಿ ಅದರ ಹಣವನ್ನು ಪಡೆದುಕೊಂಡಿದ್ದ. ಇದರೊಂದಿಗೆ ೪೫೦ ಗ್ರಾಂ ಚಿನ್ನಾಭರಣ ಹಾಗೂ ಭಾರಿ ಪ್ರಮಾಣದ ನಗದನ್ನು ದೋಚಿ ವಂಚಿಸಿದ್ದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.


ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ನಡೆಸಿ ಐಪಿಸಿ ಸೆಕ್ಷನ್ ೪೨೦, ೪೦೬, ೧೨೦ಬಿ ಹಾಗೂ ’ಕರ್ನಾಟಕ ಮಾಟಮಂತ್ರ ಮತ್ತು ಅನಿಷ್ಟ ಪದ್ಧತಿಗಳ ತಡೆ ಕಾಯ್ದೆ – ೨೦೧೭’ ರ ಅಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್? ಮೆಟ್ಟಿಲೇರಿದ್ದರು.