
ಸಂಜೆವಾಣಿ ವಾರ್ತೆ,
ವಿಜಯಪುರ, ನ. 11: ಕೃಷ್ಣಾ ನದಿಯನ್ನು ಅವಲಂಬಿಸಿರುವ ಅವಳಿ ಜಿಲ್ಲೆಯ ರೈತರ ಸಂಕಷ್ಟವನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ, ನದಿಯಲ್ಲಿ ಲಭ್ಯವಿರುವ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜೈನಾಪೂರದ ಯುವ ಮುಖಂಡ ಸಚೀನ ಎಂ. ಮಂಟೂರ ಮನವಿ ಮಾಡಿದ್ದಾರೆ.
ಈ ಕುರಿತು ಅವರು ಮಾತನಾಡಿ, ಕೃಷ್ಣೆಯ ಒಡಲನ್ನು ನಂಬಿಕೊಂಡು ಬದುಕುತ್ತಿರುವ ರೈತರು ಅತಿವೃಷ್ಟಿಗೂ ನಾವೇ ಬಲಿಯಾಗಬೇಕು, ಅನಾವೃಷ್ಟಿಗೂ ನಾವೇ ಬಲಿಯಾಗಬೇಕೇ? ಎಂಬ ಪ್ರಶ್ನೆ ಎದುರಾಗಿದೆ. ಫೆಬ್ರುವರಿ ಕೊನೆಯ ವಾರದಲ್ಲಿ ಇರಬೇಕಾದ ಕೃಷ್ಣಾ ನದಿಯ ನೀರಿನ ಪ್ರಮಾಣ ಈಗಾಗಲೇ ನವೆಂಬರ್ ಮೊದಲ ವಾರದಲ್ಲಿಯೇ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈಗಾಗಲೇ ಅಪಾರ ಪ್ರಮಾಣದ ಭೂಮಿಯನ್ನು ಕಳೆದುಕೊಂಡಿರುವ ಈ ಭಾಗದ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಜಾನುವಾರುಗಳು ಹಾಗೂ ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರು ದೊರೆಯದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಈ ದುಸ್ಥಿತಿಗೆ ಕಾರಣವಾಗುವ ನೀರಿನ ಅಭಾವದ ಹೊಣೆಯನ್ನು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳೇ ಹೊರಬೇಕಾಗುತ್ತದೆ. ಆದ್ದರಿಂದ ಅವಳಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರ ಹಿತದೃಷ್ಟಿಯಿಂದ ಕೃಷ್ಣಾ ನದಿಯ ನೀರನ್ನು ಉಳಿಸುವ ಹಾಗೂ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು.
ಈ ಭಾಗದ ರೈತರ ಋಣ ತಮ್ಮ ಮೇಲಿದೆ ಎಂಬ ಕಿಂಚಿತ್ತಾದರೂ ಭಾವನೆ ಇದ್ದರೆ, ಕೃಷ್ಣೆಯ ಒಡಲಿನ ನೀರನ್ನು ಉಳಿಸುವ ಮೂಲಕ ರೈತರ ಬದುಕಿಗೆ ಆಸರೆಯಾಗಬೇಕು ಎಂದು ಸಚೀನ ಎಂ. ಮಂಟೂರ ಮನವಿ ಮಾಡಿದ್ದಾರೆ.





















