
ಸಂಜೆವಾಣಿ ವಾರ್ತೆ,
ವಿಜಯಪುರ, ನ. 11: ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಆಗ್ರಹಿಸಿದರು.
ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಂಗಳವಾರ ಟಿಪ್ಪು ಸುಲ್ತಾನ್ ಅವರ 276ನೇ ಜಯಂತಿಯನ್ನು ವಿವಿಧ ಅಹಿಂದ ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅಬ್ದುಲ್ ಹಮೀದ್ ಮುಶ್ರೀಫ್, ಟಿಪ್ಪು ಸುಲ್ತಾನ್ ನಾಡು ಕಂಡ ಅದ್ವಿತೀಯ ಆಡಳಿತಗಾರರಾಗಿದ್ದು, ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಟಿಪ್ಪು ಸುಲ್ತಾನ್ ಅವರನ್ನು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರು ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯಗಳ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ನಾಯಕರು. ಶೋಷಿತ ವರ್ಗಗಳ ಪರವಾಗಿ ಕೆಲಸ ಮಾಡುವುದರ ಜತೆಗೆ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿಯೂ ಶ್ರಮಿಸಿದ್ದಾರೆ ಎಂದು ಹೇಳಿದರು.
ಪ್ರತಿ ವರ್ಷ ವಿವಿಧ ಅಡೆತಡೆಗಳ ನಡುವೆಯೂ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರವೇ ಅಧಿಕೃತವಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಟಿಪ್ಪು ಸಂಘರ್ಷ ಸಮಿತಿಯ ಮುಖಂಡ ಇರ್ಫಾನ್ ಶೇಖ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯ ದಿನವೇ ಜನಿಸಿದ ಇಬ್ಬರು ಮಕ್ಕಳ ಜನ್ಮದಿನವನ್ನು ವೇದಿಕೆಯಲ್ಲಿ ಸರಳವಾಗಿ ಆಚರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ರಫೀಕ್ ಟಪಾಲ್, ಅಬ್ದುಲ್ ರಜಾಕ್ ಹೊರ್ತಿ, ಜೈನುಲ್ಲಾಬಿದ್ದೀನ್, ವಸಂತ ಹೊನಮೋಡೆ, ಶಬ್ಬೀರ್ ಜಹಾಗೀರದಾರ, ಸೈಯದ್ ಆಲ್ಲಾಂ ಪಾಶಾ ಉರ್ಫ್ ಆಫ್ತಾಬ್ ಖಾದ್ರಿ, ಖೈಸರ್ ಹುಸೇನ್ ಇನಾಮದಾರ, ವಿರೇಶ್ ಕಲಾಲ, ಎಂ.ಸಿ. ಮುಲ್ಲಾ, ಅಡಿವೆಪ್ಪ ಸಾಲಗಲ್, ಶರಣಪ್ಪ ಯಕ್ಕುಂಡಿ, ಸೈಯದ್ ಆಸೀಪ್ ಉಲ್ಲಾ ಖಾದ್ರಿ, ಚೆನ್ನು ಕಟ್ಟಿಮನಿ, ನಾಗರಾಜ ಲಂಬು ಸೇರಿದಂತೆ ಹಲವು ಮುಖಂಡರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





















