Home ಜಿಲ್ಲೆ ಕಲಬುರಗಿ ನಾರಿ ಶಕ್ತಿ ವಂದನ್ ಬಿಲ್ ತಕ್ಷಣ ಜಾರಿ ಮಾಡಿ, ಓಬಿಸಿ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಲು ಜಿಲ್ಲಾ...

ನಾರಿ ಶಕ್ತಿ ವಂದನ್ ಬಿಲ್ ತಕ್ಷಣ ಜಾರಿ ಮಾಡಿ, ಓಬಿಸಿ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಲು ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ

ಕಲಬುರಗಿ:ಮೇ.4: ನಾರಿ ಶಕ್ತಿ ವಂದನ್ ಬಿಲ್-2023 ಅನ್ನು ತಕ್ಷಣ ಜಾರಿಗೊಳಿಸಬೇಕು ಹಾಗೂ ಮಹಿಳಾ ಮೀಸಲಾತಿಯಲ್ಲಿ ಔಃಅ ಮಹಿಳೆಯರನ್ನೂ ಒಳಗೊಳಿಸಬೇಕು ಎಂದು ಆಗ್ರಹಿಸಿ ಕಲಬುರಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸುವ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಸಿಂಗೆ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೂ ಅದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದು ಮಹಿಳೆಯರ ಆಶಯಗಳಿಗೆ ಧಕ್ಕೆ ತಂದಂತಾಗಿದೆ ಎಂದು ಆರೋಪಿಸಿದರು. ಮಹಿಳೆಯರಿಗೆ ರಾಜಕೀಯ ಅವಕಾಶಗಳನ್ನು ವಿಸ್ತರಿಸುವ ಹೆಸರಿನಲ್ಲಿ ಘೋಷಣೆಗಳಷ್ಟೇ ನಡೆಯುತ್ತಿದ್ದು, ವಾಸ್ತವದಲ್ಲಿ ಅನುಷ್ಠಾನದಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ ಎಂದು ಟೀಕಿಸಿದರು.
ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಸಮಾನ ಅವಕಾಶ ದೊರೆಯಬೇಕು. ಓಬಿಸಿ ಮಹಿಳೆಯರನ್ನು ಮೀಸಲಾತಿಯ ವ್ಯಾಪ್ತಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯದ ಆಶಯವನ್ನು ಸಾಕಾರಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಜನರ ಧ್ವನಿಯೇ ಅಂತಿಮವಾಗಿದ್ದು, ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು. ಸುಳ್ಳು ಪ್ರಚಾರ, ದ್ವೇಷ ರಾಜಕೀಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಮಹಿಳಾ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡಲಿದೆ ಎಂದರು.
ಈ ಪ್ರತಿಭಟನೆಯಲ್ಲಿ ಸಂಗೀತಾ ಪಾಟೀಲ್, ಅನುರಾಧಾ, ಗೀತಾ ಮುದಗಲ್, ಜಯಶ್ರೀ ಚಿಂತಪಳ್ಳಿ, ಲಕ್ಷ್ಮಿ ಸರಸಂಬಕರ್, ಶಹನಾಜ್ ಅಕ್ತರ್, ಸಹೇರಾ ಬಾನು ಸೇರಿದಂತೆ ಕಾರ್ಯಕರ್ತೆಯರು ಭಾಗವಹಿಸಿದ್ದರು.