Home ಜಿಲ್ಲೆ ತುಮಕೂರು ಕೆರೆ ಏರಿ ಅಭಿವೃದ್ಧಿ, ಮಿನಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

ಕೆರೆ ಏರಿ ಅಭಿವೃದ್ಧಿ, ಮಿನಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

ಹುಳಿಯಾರು, ಮಾ. ೧೪- ಪಟ್ಟಣದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ನಿತ್ಯ ಸಂಚರಿಸುವ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಹುಳಿಯಾರು ಕೆರೆ ಏರಿಯ ರಸ್ತೆ ಅಭಿವೃದ್ಧಿ ಹಾಗೂ ಮಿನಿ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಹುಳಿಯಾರು ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷರಾದ ಈ. ರವೀಶ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಹುಳಿಯಾರು-ಕೆಂಕೆರೆ ಮಧ್ಯೆ ಇರುವ ಸುಮಾರು ೧ ಕಿ.ಮೀ. ಉದ್ದದ ಕೆರೆ ಏರಿಯ ರಸ್ತೆಯು ಪ್ರಸ್ತುತ ಅತ್ಯಂತ ಕಿರಿದಾಗಿದ್ದು, ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿದೆ. ಈ ರಸ್ತೆಯ ಮೂಲಕ ಹುಳಿಯಾರಿನ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ನಿತ್ಯ ಸುಮಾರು ೧೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದರು. ಆದರೆ ಜಾಲಿಗಿಡ ಹಾಗೂ ಅಸುರಕ್ಷತೆಯಿಂದ ಕೆರೆ ಏರಿ ಬಿಟ್ಟು ಈಗ ಅನೇಕ ವಿದ್ಯಾರ್ಥಿಗಳು ಹೈವೆ ರಸ್ತೆಯಲ್ಲಿ ಓಡುತ್ತಿದ್ದಾರೆ. ವಾಹನಗಳ ಅತಿ ವೇಗದ ಸಂಚಾರದಿಂದಾಗಿ ವಿದ್ಯಾರ್ಥಿಗಳು ಪ್ರತಿದಿನ ಭಯದ ನೆರಳಿನಲ್ಲಿಯೇ ಓಡಾಡುವಂತಾಗಿದೆ ಎಂದು ಸಮಸ್ಯೆ ವಿವರಿಸಿದ್ದಾರೆ.


ಹಳೆಯ ಬೇಡಿಕೆಗೆ ಮರುಜೀವ
೨೦೦೬-೦೭ ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಕಾಲದಲ್ಲಿ ರೋಟರಿ ಕ್ಲಬ್ ಮನವಿಯ ಮೇರೆಗೆ ಈ ಕೆರೆ ಏರಿಯ ಮೇಲೆ ರಸ್ತೆ ನಿರ್ಮಿಸಲಾಗಿತ್ತು. ಆದರೆ, ವರ್ಷಗಳು ಕಳೆದಂತೆ ಸೂಕ್ತ ನಿರ್ವಹಣೆ ಇಲ್ಲದೆ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಈಗಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ರವೀಶ್ ಅವರು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಹಾಗೂ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಕೆರೆ ಕೋಡಿ ಬಳಿ ಒಂದು ಮಿನಿ ಸೇತುವೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸೇತುವೆ ನಿರ್ಮಾಣವಾದರೆ ವಿದ್ಯಾರ್ಥಿಗಳು ಸುಲಭವಾಗಿ ರಸ್ತೆ ದಾಟಲು ಮತ್ತು ಸಂಭಾವ್ಯ ಅಪಘಾತಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.


ಜಿಲ್ಲಾ ಪಂಚಾಯಿತಿಗೆ ಮುಖ್ಯಮಂತ್ರಿಗಳ ಕಚೇರಿ ಸೂಚನೆ
ರೋಟರಿ ಕ್ಲಬ್‌ನ ಈ ಜನಪರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಗಳು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಈ. ರವೀಶ್, ಸಾವಿರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಈ ಯೋಜನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಸ್ತೆ ಮತ್ತು ಸೇತುವೆ ಕಾಮಗಾರಿಯನ್ನು ಶೀಘ್ರ ಆರಂಭಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ- ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.