
ಯಾದಗಿರಿ,ಸೆ.11-ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ವಾಚ್‍ಮನ್ ಹುದ್ದೆಗಳ ಕಾರ್ಮಿಕರಿಗೆ ಇಲಾಖೆ ಯಿಂದ ಜೂನ್ ಜುಲೈ ಮತ್ತು ಆಗಸ್ಟ್ ತಿಂಗಳಿಂದ ವೇತನ ಪಾವತಿ ಮಾಡಿರುವುದಿಲ್ಲ. ಈ ಕಾರ್ಮಿಕರಿಗೆ ಕೂಡಲೇ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯಿಂದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ರಾದ ಡಿ.ಉಮಾದೇವಿ ಯವರ ನೇತೃತ್ವದಲ್ಲಿ ಕಾರ್ಮಿಕ ನಿಯೋಗವು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ವನ್ನು ಸಲ್ಲಿಸಲಾಯಿತು.
ಮನವಿ ಪತ್ರ ವನ್ನು ಸ್ವೀಕರಿಸಿದ ಸಹಾಯಕ ನಿರ್ದೇಶಕರು ಕಾರ್ಮಿಕರ ಸಮಸ್ಯೆ ಗಳ ಕುರಿತು ನಿಯೋಗ ದೊಂದಿಗೆ ಚರ್ಚೆ ನಡೆಸಿದರು. ಏಜೆನ್ಸಿಗಳಿಗೆ ಈಗಾಗಲೇ ವೇತನ ಬಿಲ್ ನೀಡಲಾಗಿದ್ದು ವೇತನ ಪಾವತಿ ಮಾಡದಿರುವುದು ಸರಿಯಿಲ್ಲ ಎಂದು ಹೇಳಿದ ಅವರು, ಎಲ್ಲಾ ಕಾರ್ಮಿಕರಿಗೆ ವೇತನ ಪಾವತಿಸಲು ಹೊರಗುತ್ತಿಗೆ ಏಜೆನ್ಸಿಯ ಮುಖ್ಯಸ್ಥರಿಗೆ ಹೇಳಿದರು. ಎಲ್ಲಾ ಕಾರ್ಮಿಕರಿಗೆ ಈ ಕೂಡಲೇ ಇಎಸ್‍ಐ ಕಾರ್ಡ್‍ಗಳನ್ನು ನೀಡಲು ತಿಳಿಸಿದರು.
ಭರವಸೆಯಂತೆ ವೇತನ ಪಾವತಿ ಮಾಡದಿದ್ದರೆ ಇಲಾಖೆಯ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಡಿ.ಉಮಾದೇವಿ ನೇತೃತ್ವದಲ್ಲಿ ಸಾಬಮ್ಮ ಮೋಟ್ನಳ್ಳಿ, ಕಾಶಪ್ಪ, ಶ್ರೀಕಾಂತ್, ನರಸಪ್ಪ , ಸಿದ್ದು, ಅಂಜಪ್ಪ , ನಾಗಮ್ಮ, ಪ್ರೀತಿ ಲಕ್ಷ್ಮಿ, ಶಾಮ್, ರತ್ನಮ್ಮ, ಆನಂದ್, ಸುರೇಶ್, ಕುಶಾಲ್, ಶರಣಪ್ಪ ತಳಗೇರಿ, ಮಲ್ಲಮ್ಮ ಇನ್ನಿತರರು ಭಾಗವಹಿಸಿದ್ದರು.































