
ಚಡಚಣ,ನ.6: ಕೃಷಿ ಸಂಸ್ಕøತಿಯ ಉಳಿವು ಹಾಗೂ ಜೋಡೆತ್ತಿನ ಕೃಷಿ ಪದ್ಧತಿಯ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಶೇ.10ರಷ್ಟು ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ತಾಲೂಕಿನ ರೈತರು ಗುರುವಾರ 60ಕ್ಕೂ ಹೆಚ್ಚು ಜೋಡೆತ್ತಿನ ಬಂಡಿಗಳೊಂದಿಗೆ ಚಡಚಣ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
ತಾಲೂಕಿನ ಜೋಡೆತ್ತಿನ ರೈತರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಸೇರಿದಂತೆ 60ಕ್ಕೂ ಹೆಚ್ಚು ಜೋಡೆತ್ತಿನ ಬಂಡಿಗಳೊಂದಿಗೆ ಪಟ್ಟಣದ ಕೆಇಬಿ ಕಚೇರಿಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಸಾಂಕೇತಿಕವಾಗಿ ಬಸವೇಶ್ವರ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಕೆಲಹೊತ್ತು ಧರಣಿ ಸತಾಗ್ರಹ ಮಾಡಿದ ಬಳಿಕ ಉಪ ತಹಶೀಲ್ದಾರ್ ಕೆ.ವೈ. ಹೊಸಮನಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಹಿರಿಯ ರೈತ ಮುಖಂಡ ನಂದಿ ಸೇನೆ ವಿಜಯಪುರ ಜಿಲ್ಲಾಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿ, ಕೃಷಿ ಮತ್ತು ರೈತರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಜೋಡೆತ್ತಿನ ಕೃಷಿ ಪದ್ಧತಿ ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಒಟ್ಟು ಬಜೆಟ್ನಲ್ಲಿ ಶೇ.10ರಷ್ಟು ಅನುದಾನವನ್ನು ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಮೀಸಲಿಡುವಂತೆ ಕಾನೂನು ರೂಪಿಸಬೇಕು. ಪ್ರತಿಯೊಬ್ಬ ಜೋಡೆತ್ತಿನ ಕೃಷಿಕರಿಗೆ ಮಾಸಿಕ ರೂ 11 ಸಾವಿರ ಪೆÇ್ರೀತ್ಸಾಹಧನ ನೀಡುವ ಯೋಜನೆ ಜಾರಿಗೊಳಿಸಬೇಕು ಮತ್ತು ರಾಜ್ಯದ ಒಟ್ಟು ಬಜೆಟ್ನ ಶೇ.10ರಷ್ಟು ಅನುದಾನವನ್ನು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಮೀಸಲಿಡುವ ಕಾನೂನನ್ನು ಜ್ಞಾನಯೋಗಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಜಾರಿಗೆ ತರಬೇಕು. ಈ ಕಾನೂನು ನಾಡಿನ ಪೂಜ್ಯರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಬೇಕು ಎಂಬುದು ಜೋಡೆತ್ತಿನ ರೈತರ ನಂದಿ ಸೇನೆಯ ಪ್ರಮುಖ ಬೇಡಿಕೆಯಾಗಿದೆ. ಕೃಷಿ ಸಂಸ್ಕೃತಿಯ ಸಂರಕ್ಷಣೆ, ಜೋಡೆತ್ತುಗಳ ಸಾಕಾಣಿಕೆ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಪುನಶ್ಚೇತನಕ್ಕೆ ಈ ಕಾನೂನು ಶಾಶ್ವತ ಬಲ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಮಹಾದೇವ ಕರ್ಲಮಳ,ಕರ್ನಾಟಕ ರಾಜ್ಯ ರೈತಸಂಘ ದ ಬೀರಪ್ಪ ಸಲಗರ ಮಾತನಾಡಿದರು.
ಈ ಸಂದರ್ಭದಲ್ಲಿ ಹಾವಿನಾಳ ಚರಮೂರ್ತಿ ಮಠದ ವಿಜಯ ಮಹಾಂತೇಶ ಶಿವಾಚಾರ್ಯರು,ಸ್ಥಳಿಯ ಯೋಗಾಶ್ರಮದ ಯೋಗಾನಂದ ಸ್ವಾಮಿಜಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಗೌರವಾಧ್ಯಕ್ಷ ಮುರುಗೇಶ ಸಿಂಪಿ, ಮಹಾದೇವ ಬನಸೋಡೆ, ಮಹಾದೇವ ಹಿರೇಕುರುಬರ, ಸೋಮು ಕಂಬಾರ, ಘೆನೆಪ್ಪ ಬಿರಾದಾರ, ಕಲ್ಲಪ್ಪ ಅರವತ್ತಿ, ಕಾಶಿರಾಯ ಕಾಮಗೊಂಡ, ಲಾಯಪ್ಪ ವಾಘಮೋರೆ, ಮಹಾದೇವ ತೇಲಿ, ಧರೆಪ್ಪ ಬಿರಾದಾರ, ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.





















