
ಆಳಂದ:ಏ.23: ತಾಲೂಕಿನ ಭೂಸನೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ವಿರುದ್ಧ ಕಬ್ಬಿನ ಬಿಲ್ ಪಾವತಿಯಲ್ಲಿ ವಿಳಂಬವಾಗುತ್ತಿರುವುದನ್ನು ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಬುಧವಾರ ತೀವ್ರ ಪ್ರತಿಭಟನೆ ನಡೆಸಿದರು. ನಿರಂತರವಾಗಿ ವ್ಯಕ್ತವಾಗುತ್ತಿರುವ ಆಕ್ರೋಶದ ನಡುವೆಯೇ ಕಾರ್ಖಾನೆ ಮುಂದೆ ನಡೆದ ಈ ಪ್ರತಿಭಟನೆ ಗಮನಸೆಳೆಯಿತು.
ನಮ್ಮ ಕರ್ನಾಟಕ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಜಗತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಮುಂದಿಟ್ಟರು. ಕಾರ್ಖಾನೆ ಗುತ್ತಿಗೆ ಪಡೆಯುವಾಗ ಗ್ರಾಮಾಭಿವೃದ್ಧಿ, ಕುಡಿಯುವ ನೀರು, ರಸ್ತೆ, ಸರ್ಕಾರಿ ಶಾಲೆ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸುವುದಾಗಿ ನೀಡಿದ್ದ ಭರವಸೆಗಳನ್ನು ಇದುವರೆಗೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳೀಯ ಕಾರ್ಮಿಕರು ಮತ್ತು ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುವುದಾಗಿ ಹೇಳಿದ್ದರೂ, ಯುವಕರಿಗೆ ಸ್ಥಿರ ಉದ್ಯೋಗ ನೀಡದೆ ಹೆಚ್‍ಆರ್‍ಸಿ ಮಟ್ಟದಲ್ಲೇ ಉಳಿಸಿರುವುದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ದೂರಿದರು. ಜೊತೆಗೆ, ಕಬ್ಬು ಕಟಾವು ಆದ 20 ದಿನಗಳಲ್ಲಿ ಬಿಲ್ ಪಾವತಿಸುವುದಾಗಿ ಹೇಳಿದ್ದರೂ, ಇನ್ನೂ ಹಣ ಜಮಾ ಆಗದಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಸುತ್ತಮುತ್ತ ವಾಯು ಮಾಲಿನ್ಯ ಹೆಚ್ಚುತ್ತಿರುವುದರಿಂದ ಪರಿಸರ ಹಾನಿ ಉಂಟಾಗುತ್ತಿದ್ದು, ಕ್ರೀಡಾಂಗಣ, ಉದ್ಯಾನವನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕೆಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಕಾರರ ರಮೇಶ ಜಗತಿ ನೀಡಿದ ಮನವಿ ಸ್ವೀಕರಿಸಿದ ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಬಾಕಿ ಇರುವ ಕಬ್ಬಿನ ಬಿಲ್ ಪಾವತಿಗೆ 15 ದಿನಗಳ ಕಾಲಾವಕಾಶ ನೀಡುವಂತೆ ವಿನಂತಿಸಿದರು. ಆದರೆ ಇದುವರೆಗೆ ಭರವಸೆಗಳμÉ್ಟೀ ಸಿಗುತ್ತಿದ್ದು, ರೈತರಿಗೆ ನೈಜ ಪರಿಹಾರ ದೊರಕದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ಕಲ್ಯಾಣಿ ಜಮಾದಾರ, ಭೂಸನೂರ ಗ್ರಾಪಂ ಅಧ್ಯಕ್ಷ ಮುತ್ತಣ್ಣ ಬೀಳಗಿ, ಸಚೀನ ಪಂತ, ಸೋಮು ಪಾಟೀಲ, ಶರಣು ಮುನ್ನೊಳ್ಳಿ, ಅನೀಲ ರಾಠೋಡ, ರಾಜ ಜೇವರ್ಗಿ, ರಾಹುಲ ಪಟ್ಟಣ, ಮಹೇಶ್ವರ ಗೋಸ್ವಾಮಿ, ದಸ್ತಗಿರ ಗೊರ, ಶರಣ ಕರಲಗಿ, ದತ್ತು ಪವಾರ ಸೇರಿದಂತೆ ಅನೇಕರು ಭಾಗವಹಿಸಿ ಬೇಡಿಕೆಗಳನ್ನು ಆಗ್ರಹಿಸಿದರು.






















