Home ಜಿಲ್ಲೆ ಸಂಸ್ಕಾರ, ಮೌಲ್ಯಗಳು ಶಿಕ್ಷಣದಷ್ಟೇ ಪ್ರಮುಖ

ಸಂಸ್ಕಾರ, ಮೌಲ್ಯಗಳು ಶಿಕ್ಷಣದಷ್ಟೇ ಪ್ರಮುಖ

ಬೀದರ್:ಮೇ.4:ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯ, ನೈತಿಕ ಪಾಠ ಸಿಗುವುದು ತೀರ ಕಮ್ಮಿಯಾಗಿದೆ. ದೇಶದ ಭವಿಷ್ಯವಾದ ಮಕ್ಕಳು ಮುಂದೆ ಅಡ್ಡ ಹಾದಿ ಹಿಡಿಯುವುದಕ್ಕೆ ಇದರ ಕೊರತೆಯೇ ಕಾರಣವಾಗುತ್ತಿದೆ. ಮಕ್ಕಳ ಭವಿಷ್ಯ ದೃಷ್ಟಿಯಿಂದ ಪಾಲಕರು ಶಿಕ್ಷಣದಷ್ಟೇ ಮಹತ್ವ ಸಂಸ್ಕಾರ, ಮೌಲ್ಯಗಳಿಗೂ ನೀಡುವುದು ಅನಿವಾರ್ಯವಾಗಿದೆ ಎಂದು ವಿಜಯನಗರ (ಹೊಸಪೇಟೆ) ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಸುಮೇಧಾನಂದ ಮಹಾರಾಜ ಹೇಳಿದರು.

ಇಲ್ಲಿನ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡ 8 ದಿನದ ವಸಂತ ವಿಹಾರ ವಸತಿಯುತ ಶಿಬಿರಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕೇವಲ ಪಾಠಪುಸ್ತಕಗಳ ಜ್ಞಾನಕ್ಕೆ ಮಾತ್ರ ಸೀಮಿತವಾಗಬಾರದು. ಶಿಕ್ಷಣ ವ್ಯಕ್ತಿಗೆ ಉದ್ಯೋಗ ಕೊಡಬಹುದು, ಆದರೆ ಸಂಸ್ಕಾರವು ಅವನಿಗೆ ವ್ಯಕ್ತಿತ್ವ ಕೊಡುತ್ತದೆ. ಮೌಲ್ಯಗಳು, ನೈತಿಕತೆಗಳೇ ವ್ಯಕ್ತಿಯ ಜೀವನದ ಸಾರ್ಥಕತೆ ನಿರ್ಧರಿಸುತ್ತವೆ ಎಂಬುದು ಯಾರೂ ಮರೆಯಕೂಡದು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಸತ್ಸಂಸ್ಕಾರ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಸತ್ಯ, ಶ್ರದ್ಧೆ, ಶಿಸ್ತು, ಸೇವಾಭಾವನೆ, ಹಿರಿಯರ ಗೌರವ ಇವುಗಳನ್ನೇ ಜೀವನದ ಆಧಾರವಾಗಿಸಬೇಕು. ದೇಶದ ದೊಡ್ಡ ಶಕ್ತಿಯಾಗಿರುವ ಯುವಜನರು ಇಂದು ದಾರಿ ತಪ್ಪುತ್ತಿರುವುದು ನಾವು ನೋಡುತ್ತಿದ್ದೇವೆ. ಇದಕ್ಕೆ ಮೌಲ್ಯಗಳ ಕೊರತೆಯೇ ಮುಖ್ಯ ಕಾರಣ. ಮಕ್ಕಳ ಚಾರಿತ್ರ್ಯ ನಿರ್ಮಾಣವೇ ವಸಂತ ವಿಹಾರ ಶಿಬಿರದ ಉದ್ದೇಶವಾಗಿದೆ. ಶಾರೀರಿಕ, ಮಾನಸಿಕ ಬೆಳವಣಿಗೆ ಜೊತೆಗೆ ಆಧ್ಯಾತ್ಮಿಕ ಚಿಂತನೆಗೂ ಇಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯೋಗ, ಧ್ಯಾನ, ಪ್ರಾರ್ಥನೆ, ಕ್ರೀಡೆ, ವ್ಯಕ್ತಿತ್ವ ವಿಕಸನ ತರಗತಿ, ಸಾಂಸ್ಕøತಿಕ ಚಟುವಟಿಕೆಗಳು ಮಕ್ಕಳ ಸಮಗ್ರ ವಿಕಾಸಕ್ಕೆ ಬುನಾದಿ ಹಾಕುತ್ತವೆ ಎಂದರು.

ಶಿಬಿರದ ರೂವಾರಿ, ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಸಾನಿಧ್ಯ ವಹಿಸಿ ಮಾತನಾಡಿ, ಮೌಲ್ಯಗಳೇ ಜೀವನಕ್ಕೆ ನಿಜವಾದ ಬೆಳಕು ನೀಡುತ್ತವೆ. ಆಧ್ಯಾತ್ಮಿಕ ಚಿಂತನೆ ಜೀವನಕ್ಕೆ ಸಮತೋಲನ ನೀಡುತ್ತದೆ. ಯೋಗ, ಧ್ಯಾನ ಮತ್ತು ಪ್ರಾರ್ಥನೆಗಳ ಮೂಲಕ ಮನಸ್ಸನ್ನು ಶುದ್ಧಗೊಳಿಸಬಹುದು. ಇದರಿಂದ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಧೈರ್ಯ ವೃದ್ಧಿಯಾಗುತ್ತದೆ. ಬಾಹ್ಯಲೋಕ ಗೆಲ್ಲುವುದಕ್ಕಿಂತ ಮೊದಲು ನಿಮ್ಮೊಳಗಿನ ಮನಸ್ಸನ್ನು ಗೆಲ್ಲಿರಿ. ಇದೇ ಉನ್ನತತೆಗೆ ಒಯ್ಯುತ್ತದೆ ಎಂದರು.

ಮಕ್ಕಳ ವ್ಯಕ್ತಿತ್ವ ರೂಪಿಸಲು ಪೂರಕವಾಗಿ ಕಳೆದ 15 ವರ್ಷಗಳಿಂದ ಆಶ್ರಮ ವಸಂತ ವಿಹಾರ ಶಿಬಿರ ನಡೆಸುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡ ಬಹುತೇಕರು ಆದರ್ಶ ಬದುಕು ಕಂಡುಕೊಳ್ಳುತ್ತಿದ್ದಾರೆ. ಇದು ಟೈಮ್‍ಪಾಸ್ ಶಿಬಿರವಲ್ಲ, ಜೀವನದ ಮಾರ್ಗದರ್ಶನ ನೀಡುವ ಮೌಲ್ಯಯುತ ವೇದಿಕೆಯಾಗಿದೆ. ಬೀದರ್ ಮಾತ್ರವಲ್ಲ, ಬೆಂಗಳೂರು, ಕಲಬುರಗಿ, ವಿಜಯಪುರ ಇತರೆಡೆಯಿಂದಲೂ ಮಕ್ಕಳು ಬಂದಿದ್ದಾರೆ ಎಂದು ಹೇಳಿದರು.

ಸ್ವಾಮಿ ಸುಮೇಧಾನಂದ ಮಹಾರಾಜ ಅವರ ಭಜನ, ಸಂಗೀತ ಸಭಿಕರಿಗೆ ಆಧ್ಯಾತ್ಮ ಲೋಕದಲ್ಲಿ ತೇಲಿಸಿತು. ಆಶ್ರಮದ ಭಕ್ತರು ಇದ್ದರು. ಶಿಬಿರ ಮೇ 10ರಂದು ಮುಗಿಯಲಿದೆ. ಸೋಮವಾರ ಮಧ್ಯಾಹ್ನದವರೆಗೂ 3 ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಶಿಬಿರಕ್ಕೆ ಸೇರಿಸಲು ಅವಕಾಶವಿದೆ.

ಸಂಸ್ಕಾರವಿಲ್ಲದ ಜ್ಞಾನವು
ಸಮಾಜಕ್ಕೆ ಅಪಾಯಕಾರಿ!

ಅಂಕ ಹಾಗೂ ಪದವಿಗಳೇ ಜೀವನದ ಯಶಸ್ಸನ್ನು ನಿರ್ಧರಿಸುವುದಿಲ್ಲ. ಕಮ್ಮಿ ಅಂಕ ಹಾಗೂ ಅಲ್ಪ ಪದವಿ ಹೊಂದಿದ ಅನೇಕರು ವಿಶ್ವವೇ ತಿರುಗಿ ನೋಡುವಂಥ ಅಗಾಧ ಸಾಧನೆ ಮಾಡಿರುವ ಅಸಂಖ್ಯ ಉದಾಹರಣೆ ನಮ್ಮಲ್ಲಿವೆ. ಜ್ಞಾನವು ದೀಪದಂತೆ, ಆದರೆ ಅದಕ್ಕೆ ಬೆಳಕು ನೀಡುವುದೇ ಸಂಸ್ಕಾರ. ಸಂಸ್ಕಾರವಿಲ್ಲದ ಜ್ಞಾನ ಸಮಾಜಕ್ಕೆ ಅಪಾಯಕಾರಿಯಾಗಬಹುದು ಎಂದು ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು. ನೀವು ಎಷ್ಟು ಓದಿದ್ದೀರಿ? ಯಾವ ಹುದ್ದೆಯಲ್ಲಿದ್ದಿರಿ ಎಂಬುದಕ್ಕಿಂತಲೂ ನೀವು ಎಂಥ ವ್ಯಕ್ತಿಯಾಗಿದ್ದಿರಿ ಎಂಬುದೇ ಮುಖ್ಯ. ಅಂತೆಯೇ ನಮ್ಮ ಹಿರಿಯರು, ಚಿಂತಕರು ಏನಾದರೂ ಆಗು ಮೊದಲು ಮಾನವನಾಗು ಎಂಬ ಸಂದೇಶ ನೀಡಿದ್ದಾರೆ. ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕಾರ ಬಿತ್ತಬೇಕು. ಅದೇ ಮುಂದಿನ ದಿನಗಳಲ್ಲಿ ಒಳ್ಳೆಯ ವ್ಯಕ್ತಿತ್ವವಾಗಿ ಅರಳುತ್ತದೆ. ಸಂಪತ್ತು, ಹುದ್ದೆ, ಅಧಿಕಾರವೆಲ್ಲವೂ ತಾತ್ಕಾಲಿಕ. ಆದರೆ ಚಾರಿತ್ರ್ಯ ಶಾಶ್ವತವಾಗಿದೆ. ಇಂದಿನ ಯುವಜನತೆ ವಿವಿಧ ಪ್ರಲೋಭನೆಗಳಿಗೆ ಒಳಗಾಗಿ ದಾರಿ ತಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಹೊರಬರಲು ಆತ್ಮನಿಗ್ರಹ ಮತ್ತು ನೈತಿಕ ಮೌಲ್ಯಗಳೇ ಪರಿಹಾರ ಎಂದು ಪ್ರತಿಪಾದಿಸಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಷ್ಟೇ ಪೆÇೀಷಕರ ಕರ್ತವ್ಯವಲ್ಲ, ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಅಷ್ಟೇ ಪ್ರಮುಖವಾಗಿದೆ. ಮನೆ, ಶಾಲೆ ಮತ್ತು ಸಮಾಜ ಎಂಬ ಮೂರು ವೇದಿಕೆಗಳು ಸರಿಯಾಗಿ ಕೆಲಸ ಮಾಡಿದಾಗಲೇ ಒಳ್ಳೆಯ ನಾಗರಿಕರನ್ನು ರೂಪಿಸಲು ಸಾಧ್ಯ. ಇಂಥ ಶಿಬಿರ ಮಕ್ಕಳನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಪ್ರಮುಖ ವೇದಿಕೆ.
-ಸ್ವಾಮಿ ಸುಮೇಧಾನಂದ ಮಹಾರಾಜ

ರಾಮಕೃಷ್ಣ ಗೀತಾಶ್ರಮ ವಿಜಯನಗರ

ಪೋಷಕರು ಮಕ್ಕಳಿಗೆ ಹಣ, ಸಂಪತ್ತು ಕೊಡಲು ಮಾತ್ರ ಪ್ರಯತ್ನಿಸಬಾರದು. ಮೌಲ್ಯ ಮತ್ತು ಸಂಸ್ಕಾರಗಳನ್ನು ನೀಡುವುದೇ ಅವರಿಗೆ ನಿಮ್ಮ ದೊಡ್ಡ ಕೊಡುಗೆಯಾಗಲಿದೆ. ಸಂಸ್ಕಾರವಂತ ಮಕ್ಕಳು ಎಲ್ಲಿದ್ದರೂ ಅವರ ಸಮಾಜದ, ರಾಷ್ಟ್ರದ ಆಸ್ತಿಯಾಗಿ ಕೆಲಸ ಮಾಡಿ, ಕುಟುಂಬಕ್ಕೆ ಕೀರ್ತಿ ತರುತ್ತಾರೆ. ಈ ಶಿಬಿರ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿದೆ.
-ಸ್ವಾಮಿ ಜ್ಯೋತಿರ್ಮಯಾನಂದ
ರಾಮಕೃಷ್ಣ ಆಶ್ರಮ ಬೀದರ್