
ಅಥಣಿ : ಮೇ.೪:ಮಕ್ಕಳು ಬೇಸಿಗೆ ರಜಾ ದಿನಗಳನ್ನು ವ್ಯರ್ಥ ಮಾಡದೆ, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಪ್ರತಿಭೆ ಬೆಳೆಸಲು ಮಹತ್ವದ ಪಾತ್ರ ವಹಿಸುತ್ತವೆ. ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವ ಸಾಮರ್ಥ್ಯ ಬೆಳೆಸುತ್ತವೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಬೇಸಿಗೆ ಶಿಬಿರಗಳು ಪ್ರಯೋಜನಕಾರಿಯಾಗಿವೆ ಎಂದು ಎಂದು ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಹೇಳಿದರು.
ಅವರು ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಚಂಡಕಿ ಜನಕಲ್ಯಾಣ ಶಿಕ್ಷಣ ಸಂಘ ಹಾಗೂ ಮಹೇಶ್ ಇಂಗ್ಲಿಷ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಉದ್ಘಾಟನೆ ಮತ್ತು ಎಸ್‌ಎಸ್‌ಎಲ್‌ಸಿ ರಾಜ್ಯಮಟ್ಟದ ಟಾಪರ್ ಕು. ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಅವರ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಾಧನೆಗೆ ಬಡತನವಾಗಲಿ ಅಥವಾ ಭೌತಿಕ ಅಡೆತಡೆಗಳಾಗಲಿ ಎಂದಿಗೂ ಅಡ್ಡಿಯಾಗುವುದಿಲ್ಲ. ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮವಿದ್ದರೆ ಗುರಿ ತಲುಪುವುದು ಸುಲಭ ಎಂಬುದನ್ನು ಕಟಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಸಾಬೀತುಪಡಿಸಿದ್ದಾಳೆ. ಅವಳ ಈ ಸಾಧನೆ ಇತರ ಗ್ರಾಮೀಣ ಪ್ರತಿಭೆಗಳಿಗೆ ದಾರಿದೀಪವಾಗಿದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಏಳು ವಿದ್ಯಾರ್ಥಿಗಳಲ್ಲಿ ಅಥಣಿ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸೇರಿರುವುದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ ಎಂದರು.
ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ, ಪೋಷಕರು ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ಮೂಲಕ ಅವರ ಆರೋಗ್ಯ ಸುಧಾರಣೆ ಮಾಡಬೇಕು. ಜೊತೆಗೆ, ಅವರು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಗಮನಹರಿಸಬೇಕು. ಬೇಸಿಗೆ ಶಿಬಿರಗಳನ್ನು ಮಕ್ಕಳಿಗೆ ಸದುಪಯೋಗವಾಗಬೇಕು ಎಂದು ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಹೇಳಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ವೈ. ವೈ. ಕೊಕ್ಕನವರ ಮಾತನಾಡಿ, ಕೇವಲ ಅಂಕಗಳಿಕೆಯ ಶಿಕ್ಷಣಕ್ಕಿಂತ, ಸಮಾಜದಲ್ಲಿ ಗೌರವದಿಂದ ಬದುಕುವ ಮತ್ತು ದೇಶಕ್ಕೆ ಕೊಡುಗೆ ನೀಡುವ ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಕು. ಪ್ರಾರ್ಥನಾ ಬಿರಾದಾರ ಪಾಟೀಲ ಮಾತನಾಡಿ ನಾನು ಹಗಲು-ರಾತ್ರಿ ನಿದ್ದೆಗೆಟ್ಟು ಓದಿಲ್ಲ. ಬದಲಾಗಿ ತರಗತಿಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದೆ. ಮಹೇಶ್ ಅಕಾಡೆಮಿಯ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಾಗ ರಾಜ್ಯಕ್ಕೆ ಟಾಪರ್ ಆಗಬೇಕೆಂಬ ಕನಸು ಕಂಡಿದ್ದೆ, ಇಂದು ಅದು ನನಸಾಗಿರುವುದು ಸಂತಸ ತಂದಿದೆ,” ಎಂದು ತನ್ನ ಯಶಸ್ಸಿನ ಹಾದಿಯನ್ನು ಹಂಚಿಕೊAಡರು.
ಕಾರ್ಯಕ್ರಮದಲ್ಲಿ ತೇರದಾಳ ವಿಜ್ಞಾನ ಪಿಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಮಗದುಮ್ಮ, ಪ್ರಾಧ್ಯಾಪಕ ಶಂಕರ ಕಮತಗಿ, ಮುಖ್ಯೋಪಾಧ್ಯಾಯ ತುಕಾರಾಮ ಬಾಗೇನ್ನವರ, ಕನ್ನಡಪರ ಹೋರಾಟಗಾರ ಶಬ್ಬೀರ್ ಸಾತಬಚ್ಚಿ, ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಮೈಗೂರ, ಮಹೇಶ್ ಚಂಡಕಿ, ಶಿಕ್ಷಣ ಪ್ರೇಮಿ ವಿಠ್ಠಲ ಚಂಡಕಿ. ಶಿವಾನಂದ ಪಾಟೀಲ, ನಾಗಪ್ಪ ಬಿರಾದರ ಪಾಟೀಲ, ಅಮಿತ ಪುಕಾಳೆ, ರಮೇಶ ಇಂಗಳೆ, ಕೆಂಚಪ್ಪ ಚಂಡಕಿ, ಶಶಿಧರ ಬರ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















