Home ಮುಖಪುಟ ಸುದ್ದಿ ೧೩.೩ ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರು ನಿಯೋಜನೆ

೧೩.೩ ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರು ನಿಯೋಜನೆ

ನವದೆಹಲಿ, ಅ. ೭- ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಲಾಗಿರುವ ಮತದಾರರನ್ನು ಗುರುತಿಸಿ, ಅವರನ್ನು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕಾಂಗ್ರೆಸ್ ವಿಶೇಷ ಅಭಿಯಾನ ಕೈಗೊಳ್ಳಲು ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಪಕ್ಷದ ವತಿಯಿಂದ ಮತ ರಕ್ಷಕ’ (ವೋಟ್ ರಕ್ಷಕ್)ರನ್ನು ನೇಮಿಸಲಾಗುತ್ತಿದ್ದು, ಅಕ್ಟೋಬರ್ ೨೫ರಿಂದ ನವೆಂಬರ್ ೨೫ರವರೆಗೆ ಒಂದು ತಿಂಗಳ ಕಾಲ ದೇಶಾದ್ಯಂತ ಅಭಿಯಾನ ನಡೆಯಲಿದೆ. ಎಸ್‌ಐಆರ್ ಬಳಿಕ ಮತದಾರರ ಪಟ್ಟಿಯಿಂದ ಹೊರಗುಳಿದಿರುವವರನ್ನು ಖುದ್ದಾಗಿ ಸಂಪರ್ಕಿಸಿ, ಅವರ ಸಮಸ್ಯೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಅರ್ಹರಿಗೆ ಫಾರ್ಮ್?೬ ಸಲ್ಲಿಸಲು ನೆರವಾಗುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಎಸ್‌ಐಆರ್‌ಗೂ ಮುನ್ನ ಹಾಗೂ ನಂತರದ ಮತದಾರರ ಪಟ್ಟಿಗಳನ್ನು ಹೋಲಿಕೆ ಮಾಡಿ, ಪ್ರತಿ ಬೂತ್‌ನಲ್ಲಿ ಹೆಸರು ಕೈಬಿಡಲಾಗಿರುವ ಮತದಾರರ ವಿವರಗಳನ್ನು ಗುರುತಿಸಲಾಗುತ್ತದೆ. ಈ ಪಟ್ಟಿಯನ್ನು ‘ಮತ ರಕ್ಷಕ’ರು ಹಾಗೂ ಬೂತ್ ಮಟ್ಟದ ಏಜೆಂಟ್‌ಗಳಿಗೆ ಒದಗಿಸಲಾಗುತ್ತದೆ.

ನಂತರ ಕಾರ್ಯಕರ್ತರು ಮನೆ?ಮನೆಗೆ ತೆರಳಿ, ಮತದಾರರ ಹೆಸರು ಪಟ್ಟಿಯಿಂದ ಏಕೆ ಕೈಬಿಡಲಾಗಿದೆ, ಅದು ನಿಯಮಾನುಸಾರ ನಡೆದಿದೆಯೇ ಅಥವಾ ತಪ್ಪಾಗಿ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ, ಅರ್ಹ ಮತದಾರರಿಗೆ ಮರುಸೇರ್ಪಡೆ ಪ್ರಕ್ರಿಯೆಯಲ್ಲಿ ನೆರವಾಗಲಿದ್ದಾರೆ.

ಅಭಿಯಾನದ ಸಮನ್ವಯ ಮತ್ತು ಮೇಲ್ವಿಚಾರಣೆಯನ್ನು ಕಾಂಗ್ರೆಸ್‌ನ ‘ಕನೆಕ್ಟ್ ಸೆಂಟರ್’ ನಿರ್ವಹಿಸಲಿದೆ. ಮತದಾರರಿಗೆ ಅಗತ್ಯ ಮಾಹಿತಿ, ದಾಖಲೆಗಳು ಹಾಗೂ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕಳೆದ ತಿಂಗಳ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಅಭಿಯಾನದ ರೂಪುರೇಷೆಗಳಿಗೆ ಅಂತಿಮ ಸ್ಪರ್ಶ ನೀಡಲಾಗಿದೆ. ತೆಲಂಗಾಣದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮಾದರಿಯನ್ನು ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ ಎಂದು ಪಕ್ಷ ತಿಳಿಸಿದೆ.

ಮತದಾರರ ನೆರವಿನ ಅಭಿಯಾನದ ಜತೆಗೆ ಎಸ್‌ಐಆರ್ ವಿರುದ್ಧ ರಾಜಕೀಯ ಹೋರಾಟವನ್ನೂ ತೀವ್ರಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಅಕ್ಟೋಬರ್ ೧೦ರಿಂದ ೨೦ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಬೂತ್ ಮಟ್ಟದ ಬೈಕ್ ರ್‍ಯಾಲಿ ಪಾದಯಾತ್ರೆ ಹಾಗೂ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಕೆಲವು ಕಡೆ ಮುಖ್ಯ ಚುನಾವಣಾ ಆಯುಕ್ತರ ಪ್ರತಿಕೃತಿ ದಹನಕ್ಕೂ ಕರೆ ನೀಡಲಾಗಿದೆ.

ನವರಾತ್ರಿ ಆಚರಣೆ ನಡೆಯುವ ಸ್ಥಳಗಳಲ್ಲಿ ‘ಮತಗಳ್ಳತನ’ದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.ಇದರ ಮುಂದುವರಿದ ಭಾಗವಾಗಿ ನವೆಂಬರ್ ೧ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಬೃಹತ್ ಸಮಾವೇಶ ಆಯೋಜಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

೧೩.೩ ಕೋಟಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಕೈಬಿಡಲಾಗಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದ್ದು, ಈ ಮತದಾರರನ್ನು ಗುರುತಿಸಿ ಅವರ ಹಕ್ಕುಗಳನ್ನು ರಕ್ಷಿಸುವುದೇ ‘ಮತ ರಕ್ಷಕ’ ಅಭಿಯಾನದ ಉದ್ದೇಶವಾಗಿದೆ ಎಂದು ಪಕ್ಷ ಹೇಳಿದೆ.