
ಚಿಕ್ಕಬಳ್ಳಾಪುರ, ಸೆ. ೨೫:ಗೊಲ್ಲಹಳ್ಳಿ ಶಿವಪ್ರಸಾದ್ ತಮ್ಮ ಬದುಕನ್ನು ಹೋರಾಟಕ್ಕೆ ಮೀಸಲಿಟ್ಟರು. ಮೇಣದ ರೀತಿಯಲ್ಲಿ ತಮ್ಮ ಜೀವನವನ್ನು ಉರಿಸಿ ಸಮಾಜಕ್ಕೆ ಬೆಳಕು ನೀಡಿದರು ಎಂದು ಸಾಹಿತಿ ರಾಜಪ್ಪ ದಳವಾಯಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಗುರುವಾರ ಇಂಡಿಯನ್ ಫೋಕ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಇರುವ ಗೊಲ್ಲಹಳ್ಳಿ ಗಾನಯಾನ ಮತ್ತು ಶಿವಪ್ರಸಾದ್ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತು ನಾವೆಲ್ಲರೂ ಬೀದಿ ನಾಟಕಗಳನ್ನು ಬರೆಯಲು, ಹಾಡುಗಳನ್ನು ಬರೆಯಲು, ಸಾಕ್ಷರತಾ ಆಂದೋಲನದ ವಿಚಾರವಾಗಿ ಒಟ್ಟಾಗಿ ಸೇರುತ್ತಿದ್ದೆವು. ಪೇಪರ್, ಪೆನ್ನು ಇಲ್ಲದೆಯೇ ಶಿವಪ್ರಸಾದ್ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎಂದು ಹೇಳಿದರು.
ಕೋಲಾರದ ಆದಿಮ ಸಂಸ್ಥೆಯ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ, “ಸಾಮಾಜಿಕ ಆರ್ಥಿಕ ಅಸಮಾನತೆ ಬದಲಾವಣೆಗೆ ಬುದ್ದ ಬಸವ ಅಂಬೇಡ್ಕರ್ ಸೇರಿದಂತೆ ಹಲವು ದಾರ್ಶನೀಕರು ಹೋರಾಟ ಮಾಡಿದ್ದಾರೆ,” ಎಂದರು. ಗೊಲ್ಲಹಳ್ಳಿ ಶಿವಪ್ರಸಾದ್ ದಲಿತ ಸಂಘರ್ಷ ಸಮಿತಿದಲ್ಲಿ ಸಾಂಸ್ಕೃತಿಕ ವಿಭಾಗವನ್ನು ಸಶಕ್ತವಾಗಿ ಕಟ್ಟಿದರು ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ದಂಪತಿಯನ್ನು ಅಭಿನಂದಿಸಲಾಯಿತು. ಅಂತರರಾಷ್ಟ್ರೀಯ ಜಂಬೆ ಕಲಾವಿದ ಬಾಲು ಜಂಬೆ ಅವರು ಹಾಗೂ ಅವರ ತಂಡದ ಜಂಬೆ ವಾದನ ಗಮನ ಸೆಳೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ನಿವೃತ್ತ ಸಹಾಯಕ ನಿರ್ದೇಶಕ ವೆಂಕಟಾಚಲಯ್ಯ, ದಲಿತ ಸಂಘರ್ಷ ಸಮಿತಿ, ಕನ್ನಡ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿವಿಧ ಸಾಂಸ್ಕೃತಿಕ ತಂಡಗಳ ಪದಾಧಿಕಾರಿಗಳು, ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

























