Home ಮುಖಪುಟ ಸುದ್ದಿ ನಟ ಧನ್ವೀರ್ ವಿರುದ್ಧ ೩ ಠಾಣೆಗಳಲ್ಲಿ ದೂರು, ಎನ್‌ಸಿಆರ್ ದಾಖಲು

ನಟ ಧನ್ವೀರ್ ವಿರುದ್ಧ ೩ ಠಾಣೆಗಳಲ್ಲಿ ದೂರು, ಎನ್‌ಸಿಆರ್ ದಾಖಲು

ಬೆಂಗಳೂರು,ಅ.೨೬-ಸ್ಯಾಂಡಲ್ ವುಡ್ ನಟ ಧನ್ವೀರ್ ಗೌಡ ವಿರುದ್ಧ ನಗರದ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದು, ಎನ್‌ಸಿಆರ್ (ನಾನ್‌ಕಾಗ್ನಿಜಬಲ್ ರಿಪೋರ್ಟ್) ದಾಖಲಿಸಲಾಗಿದೆ.


ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಸೇರಿದಂತೆ ಮೂವರು ನೀಡಿರುವ ದೂರುಗಳಿಂದ ಧನ್ವೀರ್ ಗೌಡ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.


ದೂರವಾಣಿ ಕರೆ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಹಣ ಮತ್ತು ಕಾರನ್ನು ಹಿಂದಿರುಗಿಸದೆ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ನಟ ಧನ್ವೀರ್ ವಿರುದ್ಧ ಕೇಳಿಬಂದಿವೆ. ಈ ಆರೋಪಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


ಇದಲ್ಲದೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲವು ವಿಚಾರಗಳ ಕುರಿತು ಚರ್ಚಿಸಲು ವಿಜಯಲಕ್ಷ್ಮಿ ಹಾಗೂ ನಾಗರಾಜ್ ಅವರು ಧನ್ವೀರ್ ಅವರ ಮನೆಗೆ ತೆರಳಿದ್ದರು. ಆದರೆ, ಆ ಸಂದರ್ಭದಲ್ಲಿ ಧನ್ವೀರ್ ಮನೆಯಲ್ಲಿ ಇರಲಿಲ್ಲ.
ಬಳಿಕ ಧನ್ವೀರ್ ದೂರವಾಣಿ ಕರೆ ಮಾಡಿ ಅವಾಚ್ಯ ಶ

ಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.


ಧನ್ವೀರ್ ವಿರುದ್ಧ ಬೋಜರಾಜ್ ರೈ ಎಂಬುವವರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರವಾಣಿ ಕರೆ ಹಾಗೂ ವಾಟ್ಸ್‌ಆ?ಯಪ್ ಸಂದೇಶಗಳ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೂ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
೫ ಲಕ್ಷ ಹಣ,ಕಾರು:
ಇನ್ನು ಗೌರವ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ಹಾಗೂ ಶಶಿ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.
ತಮ್ಮಿಂದ ಸುಮಾರು ?೫ ಲಕ್ಷ ಮೌಲ್ಯದ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಹಣವನ್ನು ಹಿಂದಿರುಗಿಸಿಲ್ಲ ಎಂದು ಗೌರವ್ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ವೋಕ್ಸ್‌ವ್ಯಾಗನ್ ಕಾರನ್ನು ಪಡೆದು ವಾಪಸ್ ನೀಡಿಲ್ಲ. ಹಣ ಮತ್ತು ಕಾರನ್ನು ಹಿಂದಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಪೊಲೀಸರು ಪರಿಶೀಲನೆ:


ಮೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎನ್‌ಸಿಆರ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವರದಿಯ ಪ್ರಕಾರ, ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.
ನಟ ಧನ್ವೀರ್ ಗೌಡ ವಿರುದ್ಧ ಕೇಳಿಬಂದಿರುವ ಆರೋಪಗಳು ಇನ್ನೂ ತನಿಖೆಗೆ ಒಳಪಟ್ಟಿದ್ದು, ಆರೋಪಗಳ ಸತ್ಯಾಸತ್ಯತೆ ಮುಂದಿನ ಕಾನೂನು ಪ್ರಕ್ರಿಯೆಯಿಂದ ಸ್ಪಷ್ಟವಾಗಬೇಕಿದೆ.


ದರ್ಶನ್ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮಿ ಅವರ ಆಪ್ತರ ನಡುವಿನ ವಿವಾದ ಇದೀಗ ಪೊಲೀಸ್ ಠಾಣೆಗಳ ಮೆಟ್ಟಿಲೇರಿರುವುದು ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.