Home ಜಿಲ್ಲೆ ಕಲಬುರಗಿ ಸಿಬಿಲ್ ಸ್ಕೋರ್ ಲೋಪ: ಬ್ಯಾಂಕ್‍ಗೆ 40 ಸಾವಿರದಂಡ

ಸಿಬಿಲ್ ಸ್ಕೋರ್ ಲೋಪ: ಬ್ಯಾಂಕ್‍ಗೆ 40 ಸಾವಿರದಂಡ

ಕಲಬುರಗಿ,ಜೂ.19: ಗ್ರಾಹಕರೊಬ್ಬರ ಸಿಬಿಲ್ ಸ್ಕೋರ್ ಹಾಳುಗೆಡವಿದ ಎಲ್‍ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಗೆ 40 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗವು ಮಹತ್ವದ ತೀರ್ಪು ನೀಡಿದೆ.
ನಗರದ ಆನಂದ ಪ್ರಭು ಕಾಶಪ್ಪ ಶೇರಿಕರ ಅವರು ಮನೆ ಖರೀದಿಸಲು 2021ರ ಏ.26ರಂದು ಎಲ್‍ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‍ನಿಂದ 30 ಲಕ್ಷ ರೂ. ಸಾಲ ಪಡೆದಿದ್ದರು. ನಂತರ ಅವರು ಬ್ಯಾಂಕ್ ಆಫ್ ಬರೋಡಾದ ಕಲಬುರಗಿ ಶಾಖೆಯಿಂದ ಸಾಲ ಪಡೆದು, 2023ರ ನ.21ರಂದು ಸಂಪೂರ್ಣ ಸಾಲ ಮರುಪಾವತಿಸಿದ್ದರು.ಸಾಲ ತೀರಿದರೂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆ ನೋಯ್ಡಾ ಶಾಖೆಯು 2024ರ ನ.9ರಂದು ಗ್ರಾಹಕನ ಪ್ಯಾನ್ ನಂಬರ್ ಅನ್ನು ತಪ್ಪಾಗಿ ಬೇರೆ ಬ್ಯಾಂಕ್ ಖಾತೆಗೆ ಜೋಡಣೆ ಮಾಡಿತ್ತು. ಇದರಿಂದ ದೂರುದಾರರ ಸಿಬಿಲ್ ಸ್ಕೋರ್ ಕುಸಿದಿತ್ತು. ಗ್ರಾಹಕ ಹಲವು ಬಾರಿ ಶಾಖೆಗೆ ಅಲೆದಾಡಿದರೂ ಯಾವುದೇಪ್ರಯೋಜನವಾಗಿರಲಿಲ್ಲ.
ಸಂಸ್ಥೆಯು ಸ್ಪಂದಿಸದ ಕಾರಣ ಬೇಸತ್ತ ಗ್ರಾಹಕರು 2025ರ ಜೂ.3ರಂದು ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿದ್ದರು.ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷ ಮಾಲತಿ ಗುರಣ್ಣ ಮತ್ತು ಸದಸ್ಯ ಲೋಕೇಶ ಅವರು, ಎಲ್‍ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಗೆ 25,000 ರೂ. ದಂಡ, ಮಾನಸಿಕ ವ್ಯಥೆಗಾಗಿ 10,000 ರೂ. ಹಾಗೂ ದಾವೆಯ ವೆಚ್ಚವಾಗಿ 5,000 ರೂ. ಸೇರಿ ಒಟ್ಟು 40,000ಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ಎಂದು ಜೂ.11ರಂದು ಅಂತಿಮ ಆದೇಶ ನೀಡಿದೆ. ಅಲ್ಲದೆ ತಪ್ಪಾಗಿ ಜೋಡಿಸಲಾದ ಪ್ಯಾನ್ ಸಂಖ್ಯೆಯನ್ನು ಸರಿಪಡಿಸಬೇಕು ಮತ್ತು ಸಾಲ ವಿಮುಕ್ತಿ ಪತ್ರವನ್ನು ನೀಡಬೇಕು. 45 ದಿನಗಳ ಒಳಗೆ ಪ್ಯಾನ್ ನಂಬರ್ ಸರಿಪಡಿಸದಿದ್ದರೆ, ಮುಂದಿನ ಪ್ರತಿ ದಿನಕ್ಕೆ ರೂ. 500 ರಂತೆ ಹೆಚ್ಚುವರಿ ದಂಡ ನೀಡಬೇಕೆಂದು ಆಯೋಗವು ಆದೇಶದಲ್ಲಿ ಸೂಚಿಸಿದೆ. ವಕೀಲ ಶಿವಪ್ರಕಾಶ ಸರಡಗಿ, ಗ್ರಾಹಕರ ಪರವಾಗಿ ವಾದ ಮಾಡಿದ್ದರು.