
ಬೀದರ್: ಕಳೆದ ಏ. ೧೫ ರಿಂದ ಸ್ಥಗಿತಗೊಂಡ ಬೀದರ-ಬೆಂಗಳೂರು ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ಸಂತಸದ ಸಂಗತಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಳಜಿ ವಹಿಸಿ ಪ್ರೋತ್ಸಾಹ ಧನ ನೀಡಿರುವುದು ಮತ್ತು ಮುತುವರ್ಜಿ ವಹಿಸಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಪ್ರಯತ್ನಿಸಿರುವ ಅರಣ್ಯ ಜೀವಿಶಾಸ್ತ್ರ ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಕಲಂ ೩೭೧ ಜೆ ಸಮಗ್ರ ಅನುಷ್ಠಾನ ಹೋರಾಟ ಸಮಿತಿಯ ಗೌರವಾಧ್ಯಕ್ಷ ಪೂಜ್ಯ ಶ್ರೀ ಡಾ. ಚನ್ನಬಸವಾನಂದ ಸ್ವಾಮೀಜಿ ಹಾಗೂ ಅಧ್ಯಕ್ಷ ಅಶೋಕ ಮಾನೂರೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜಧಾನಿ ಬೆಂಗಳೂರಿನಿAದ ಬೀದರ ದೂರ ಇರುವುದರಿಂದ ಬೀದರ ಅಥವಾ ಕಲ್ಯಾಣ ಕರ್ನಾಟಕ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಂಪರ್ಕ ಸಾಧನ ಬಹಳ ಮುಖ್ಯ. ಸಚಿವ ಖಂಡ್ರೆಯವರ ಕಳಕಳಿ ಮೆಚ್ಚುವಂಥದ್ದು. ಸುಮಾರು ೧೪ ಕೋಟಿಯಷ್ಟು ಪ್ರೋತ್ಸಾಹ ಧನ ಸ್ಟಾರ್ ಏರ್ ಸಂಸ್ಥೆಗೆ ಕೊಡುತ್ತಿರುವುದು ಸಂತೋಷ. ಆದಷ್ಟು ಬೇಗನೆ ವಿಮಾನಯಾನ ಸೇವೆ ಆರಂಭವಾಗಲಿ ಎಂದು ಪೂಜ್ಯ ಶ್ರೀ ಸ್ವಾಮೀಜಿ ತಿಳಿಸಿದ್ದಾರೆ.
ಇನ್ನೂ ಮುಂದೆ ಸ್ಥಗಿತಗೊಳ್ಳದಂತೆ ನಿರಂತರವಾಗಿ ವಿಮಾನಯಾನ ಸೇವೆ ನಡೆಯಲಿ. ಇದರಿಂದ ಬೀದರ ಜನತೆಗೆ ಅನುಕೂಲವಾಗಲಿದೆ. ಮತ್ತು ವ್ಯಾಪಾರ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















