
ತಾಳಿಕೋಟೆ, ಪಟ್ಟಣದ ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಸೋಮವಾರರಂದು ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುಜಾತಾ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕöÈತದ ಮೊದಲ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನವು ಸ್ಮರಣೀಯವಾಗಿದೆ. ಆರಂಭದಲ್ಲಿ ರತ್ನಾಕರನೆಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಅವರು ದರೋಡೆಕೋರನಾಗಿದ್ದರು. ಒಮ್ಮೆ ನಾರದ ಮುನಿಗಳು ಅವರನ್ನು ಭೇಟಿಯಾಗಿ, ತಾವು ಮಾಡುತ್ತಿರುವ ಪಾಪಕೃತ್ಯಗಳಲ್ಲಿ ಕುಟುಂಬದವರೂ ಭಾಗಿಯಾಗುತ್ತಾರೆಯೇ ಎಂದು ಪ್ರಶ್ನಿಸಿದಾಗ ರತ್ನಾಕರನಿಗೆ ಸತ್ಯದ ಅರಿವಾಯಿತು. ಇದರಿಂದ ತಮ್ಮ ಬದುಕನ್ನು ಬದಲಾಯಿಸಿಕೊಂಡು ಮಹಾನ್ ವ್ಯಕ್ತಿಯಾದರು. ಬದಲಾವಣೆ ಜಗದ ನಿಯಮವಾಗಿದ್ದು, ದೃಢಸಂಕಲ್ಪ ಮತ್ತು ಸತತ ಪ್ರಯತ್ನದಿಂದ ವ್ಯಕ್ತಿಯ ಜೀವನದಲ್ಲಿ ಮಹತ್ತರ ಪರಿವರ್ತನೆ ಸಾಧ್ಯ ಎಂಬುದಕ್ಕೆ ವಾಲ್ಮೀಕಿಯವರ ಬದುಕು ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ. ಮೂಗಡ್ಲಿಮಠ ಮಾತನಾಡಿ, ನಾರದ ಮುನಿಗಳ ಮಾರ್ಗದರ್ಶನದಂತೆ ರತ್ನಾಕರರು ತಪಸ್ಸು ಕೈಗೊಂಡರು. ಮರಾ ಎಂಬ ಶಬ್ದವನ್ನು ನಿರಂತರವಾಗಿ ಜಪಿಸುತ್ತಿದ್ದಾಗ ಅದು ರಾಮ' ನಾಮವಾಗಿ ರೂಪುಗೊಂಡಿತು. ಅವರ ತಪಸ್ಸಿನ ಸಂದರ್ಭದಲ್ಲಿ ಮೈಮೇಲೆ ಹುತ್ತ ಬೆಳೆದಿದ್ದು, ಅದರಿಂದ ಹೊರಬಂದ ಬಳಿಕ ಅವರಿಗೆ ವಾಲ್ಮೀಕಿ’ ಎಂಬ ಹೆಸರು ಬಂದಿತು ಎಂಬ ಪೌರಾಣಿಕ ಕಥನವನ್ನು ವಿವರಿಸಿದರು. ಮಹರ್ಷಿ ವಾಲ್ಮೀಕಿಯವರ ಜೀವನವು ವ್ಯಕ್ತಿಯ ಪರಿವರ್ತನೆಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಅಜೇಯ ಅಬ್ಬಾರ, ಡಾ. ಅಶೋಕ ರಾಠೋಡ, ಲಲಿತಾ ಗೌಡರ, ಐಶ್ವರ್ಯ, ಯಲ್ಲಾಲಿಂಗ ಚಿಗರಿ, ಯು.ಎ. ಖಾಜಿ ಗೊನಾಳ, ಬನುದೇವಿ ಹಿರೇಮಠ, ವಿದ್ಯಾರ್ಥಿನಿಯರಾದ ಮಮತಾಜ ನಾಯ್ಕೋಡಿ, ನೇಹಾ ಮರ್ಜಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
























