Home ಜಿಲ್ಲೆ ತುಮಕೂರು ಕಾರು-ಲಾರಿ ಡಿಕ್ಕಿ: ನಾಲ್ವರ ದುರ್ಮರಣ

ಕಾರು-ಲಾರಿ ಡಿಕ್ಕಿ: ನಾಲ್ವರ ದುರ್ಮರಣ

ಕುಣಿಗಲ್, ಮೇ ೧೦- ತಾಲ್ಲೂಕಿನ ಕೊತ್ತಗೆರೆ ಸಮಿಪದ ಹೊನ್ನೇನಹಳ್ಳಿ ಬಳಿ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಮೃತಪಟ್ಟವರನ್ನು ಮಂಡ್ಯದ ಶುಗರ್ ಕಾಲೋನಿ ನಿವಾಸಿಗಳಾದ ಕುಮಾರ ನರಸಿಂಹಸ್ವಾಮಿ (೬೫), ಪತ್ನಿ ಗಾಯತ್ರಿ (೬೨), ಕುಮಾರ್ ರವರ ಸಹೋದರಿ ಗಾಯತ್ರಿ (೬೩) ಹಾಗೂ ಸಂಬಂಧಿ, ಚಾಲಕ ಮೈಸೂರಿನ ಗುರುರಾಜ ಲೇಔಟ್‌ನ ರಘುಕುಮಾರ್ (೫೬) ಎಂಬುವರೇ ಮೃತಪಟ್ಟಿರುವ ದುರ್ದೈವಿಗಳು.


ಕುಮಾರ ನರಸಿಂಹಸ್ವಾಮಿ ಮತ್ತು ಗಾಯತ್ರಿ ದಂಪತಿಯ ೨೪ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಮನೆ ದೇವರಾದ ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು, ನಂತರ ಮಂಡ್ಯಕ್ಕೆ ವಾಪಸ್ ಕಾರಿನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ತಾಲ್ಲೂಕಿನ ಹೊನ್ನೇನಹಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಕಾರು ಲಾರಿಗೆ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.


ಕಾರು ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಸಿಲುಕಿದ್ದ ಶವಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ.
ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.