Home ಜಿಲ್ಲೆ ತರಕಾರಿ ಮಾರುಕಟ್ಟೆಯಲ್ಲಿ ಮಕ್ಕಳಿಗೆ ‘ವ್ಯವಹಾರ ಪಾಠ’

ತರಕಾರಿ ಮಾರುಕಟ್ಟೆಯಲ್ಲಿ ಮಕ್ಕಳಿಗೆ ‘ವ್ಯವಹಾರ ಪಾಠ’

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೬: ಶಿಕ್ಷಣವೆಂದರೆ ಕೇವಲ ತರಗತಿಯ ಪಾಠಕ್ಕೆ ಸೀಮಿತವಲ್ಲ; ಬದುಕಿನ ನೈಜ ಅನುಭವವೂ ಶಿಕ್ಷಣದ ಅವಿಭಾಜ್ಯ ಅಂಗ ಎಂಬ ಸಂದೇಶದೊAದಿಗೆ ಪ್ರೇರಣಾ ಟ್ರಸ್ಟ್ನ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗುರುಮಾತೆಯರೊಂದಿಗೆ ನಗರದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪ್ರಾಯೋಗಿಕ ಜ್ಞಾನ ಪಡೆದರು.
ಸಂಸ್ಥೆಯ ಚೇರ್ಮನ್ ಡಾ. ಅರವಿಂದ ಪಾಟೀಲ ಅವರು ಮಕ್ಕಳೊಂದಿಗೆ ಮಾರುಕಟ್ಟೆಗೆ ತೆರಳಿ ತರಕಾರಿ ಖರೀದಿಸುವ ಚಟುವಟಿಕೆಯಲ್ಲಿ ಭಾಗವಹಿಸಿದರು. ತರಕಾರಿಗಳ ಗುಣಮಟ್ಟ ಗುರುತಿಸುವುದು, ತೂಕ ಪರಿಶೀಲಿಸುವುದು, ಬೆಲೆ ತಿಳಿದು ಖರೀದಿಸುವುದು ಹಾಗೂ ಖರೀದಿಸಿದ ತರಕಾರಿಗಳನ್ನು ಚೀಲದಲ್ಲಿ ಸರಿಯಾಗಿ ಹಾಕಿಕೊಳ್ಳುವ ವಿಧಾನದ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ವಿವರಿಸಿದರು.
ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ವಿದ್ಯಾರ್ಥಿಗಳು ಬಟ್ಟೆಯ ಚೀಲಗಳನ್ನು ತರಲು ಮುಂಚಿತವಾಗಿಯೇ ಸೂಚಿಸಲಾಗಿತ್ತು. ಮಕ್ಕಳು ಬಟ್ಟೆಯ ಚೀಲಗಳೊಂದಿಗೆ ತರಕಾರಿ ಖರೀದಿಸಿ, ಮಾರುಕಟ್ಟೆಗೆ ಬಂದಿದ್ದ ರೈತರೊಂದಿಗೆ ಸಂವಾದ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದರು.
ಶಿಕ್ಷಣದ ಜತೆಗೆ ದೈನಂದಿನ ಬದುಕಿನಲ್ಲಿ ಅಗತ್ಯವಾದ ವ್ಯವಹಾರ ಜ್ಞಾನ, ಪರಿಸರ ಕಾಳಜಿ, ಹಣದ ಮೌಲ್ಯ ಹಾಗೂ ರೈತರ ಶ್ರಮದ ಅರಿವು ಮಕ್ಕಳಲ್ಲಿ ಮೂಡಿಸುವುದು ಈ ಚಟುವಟಿಕೆಯ ಉದ್ದೇಶವಾಗಿತ್ತು.