
ಜಮಖಂಡಿ ಏ.23:ತಾಲೂಕಿನ ತುಂಗಳ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಜನತಾ ಪ್ಲಾಟ್‍ನಲ್ಲಿರುವ ಮನೆಯ ಅಂಗಳದಲ್ಲೇ ಈ ದಾರುಣ ಘಟನೆ ನಡೆದಿದೆ. ಮೃತನನ್ನು ಅಶೋಕ ಕೋಳಿ (35) ಎಂದು ಗುರುತಿಸಲಾಗಿದೆ. ಮುಖಭಾಗವನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಮುಖಭಾಗ ಸಂಪೂರ್ಣ ನುಜ್ಜಾಗಿರುವ ಸ್ಥಿತಿಯಲ್ಲಿ ಅಶೋಕ ಕೋಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇನ್ನೋರ್ವ ವ್ಯಕ್ತಿಯಾದ ಉತ್ತಮ ಶಿಂದೆ (40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಮಖಂಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆ ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಸಾವಳಗಿ ಪಿಎಸ್‍ಐ ಅಪ್ಪಣ ಐಗಳಿ ಸೇರಿದಂತೆ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗೆ ಪೆÇಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.






















