
ಕಲಬುರಗಿ:ಏ.23:ಸ್ವತ: ಶಿಷ್ಟಾಚಾರ ಪಾಲಿಸದ ಶಾಸಕ ಬಿ ಆರ್ ಪಾಟೀಲ ಮತ್ತೊಬ್ಬರ ಶಿಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಆಳಂದ ತಾಲೂಕಿನಲ್ಲಿ ಶಿಷ್ಟಾಚಾರ ಎನ್ನುವುದು ಕಳೆದು ಹೋಗಿದೆ. ತಾಲೂಕಿನಲ್ಲಿ ಸರ್ಕಾರದ ಪ್ರತಿಯೊಂದು ಕಾಮಗಾರಿಗಳನ್ನು ಜನರಿಂದ ನೇರವಾಗಿ ಚುನಾಯಿತರಲ್ಲದ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ಬಿ ಆರ್ ಪಾಟೀಲರ ಅಣ್ಣನ ಮಗ ಆರ್ ಕೆ ಪಾಟೀಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರಲ್ಲದಿದ್ದರೂ ಸರ್ಕಾರದ ಯೋಜನೆಯ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅಧಿಕಾರಿಗಳು ಇಲ್ಲಿ ಶಿಷ್ಠಾಚಾರ ಪಾಲಿಸುತ್ತಿಲ್ಲ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆ ಮಾಡುವ ಬೀಜಗಳನ್ನು ಮತ್ತು ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಿದ್ದಾರೆ ಇದರ ಬಗ್ಗೆ ಈ ಹಿಂದೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಗುಮುಲ್‍ನಲ್ಲಿ ಕೋಟ್ಯಾಂತರ ರೂಪಾಯಿಯ ನೇಮಕಾತಿ ಹಗರಣ ನಡೆದಿದೆ ಅದರ ಬಗ್ಗೆ ಮಾತನಾಡಲು ಶಾಸಕರಿಗೆ ಸಮಯವಿಲ್ಲ. ಕೇವಲ ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಟೀಕಿಸಬೇಕೆಂಬ ಖಯಾಲಿಯಿಂದ ಮಾತನಾಡುತ್ತಿದ್ದಾರೆ. ಶಾಸಕ ಬಿ ಆರ್ ಪಾಟೀಲ ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಜಾಸ್ತಿ ಸಮಯವೇ ಕಳೆದಿಲ್ಲ ಇದಕ್ಕೆ ಸಾಕ್ಷಿ ಎಂಬಂತೆ ಅವರ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ಪರಿಶೀಲಿಸಲಿ ಅಲ್ಲದೇ ಎಲ್ಲ ಕಡೆ ಕಾಮಗಾರಿ ಮಾಡುವಾಗ ಖುದ್ದು ಆರ್ ಕೆ ಪಾಟೀಲ ಹಾಜರಿದ್ದು ಪೂಜೆ ನೇರವೇರಿಸಿದ್ದಾರೆ ಈ ಕುರಿತು ವರದಿಗಳು ಮಾಧ್ಯಮಗಳಲ್ಲಿಯೂ ಪ್ರಕಟವಾಗಿವೆ ಹೀಗಾಗಿ ಶಿಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿ ಆರ್ ಪಾಟೀಲಗಿಲ್ಲ ಎಂದು ಹೇಳಿದ್ದಾರೆ.






















