
ತುಮಕೂರು, ಮಾ. ೨೧- ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಉಂಟಾಗಿರುವ ಅರಾಜಕತೆ, ನೋವನ್ನು ಚುನಾವಣೆ ಮೂಲಕ ತೋರಿಸುವ ಸದಾವಕಾಶ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರಿಗೆ ದೊರೆತಿದೆ. ಈ ಉಪಚುನಾವಣೆಯನ್ನು ಈ ಎರಡು ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ದುರಾಡಳಿತವನ್ನು ಅನಾವರಣ ಮಾಡುವ ಸದಾವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ ಎಂದ ವಿಶ್ವಾಸ ತಮಗಿದೆ ಎಂದರು.
ಮದ್ಯಪ್ರಾಚ್ಯ ದೇಶಗಳ ಯುದ್ಧದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆಯೇ ಕಾರಣ ಎಂದರು.
ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಸಮಸ್ಯೆ ಉಂಟಾಗದಂತೆ ಈಗಾಗಲೇ ಆಹಾರ ಸಚಿವರು ಗ್ಯಾಸ್ ವಿತರಕರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಅಧಿಕಾರಿಗಳು ಸಹ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಇನ್ನೆರಡು ದಿನಗಳಲ್ಲಿ ಇನ್ನು ೨ ಹಡಗುಗಳಲ್ಲಿ ದೇಶಕ್ಕೆ ಗ್ಯಾಸ್ ಬರುತ್ತಿದೆ. ದೇಶದ ಜನತೆ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಆಗುವ ಅನಾಹುತಗಳಿಂದ ನಮ್ಮ ದೇಶವನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಎಂಬ ದೂರದೃಷ್ಠಿಯನ್ನು ಪ್ರಧಾನಿಗಳು ಹೊಂದಿದ್ದಾರೆ ಎಂದರು.
ಮುಂದಿನ ೩-೪ ದಿನಗಳಲ್ಲಿ ಯುದ್ಧದ ವಾತಾವರಣ ತಿಳಿಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಎಂದು ಅವರು ತಿಳಿಸಿದರು.


























