
ರಾಯಚೂರು.ಸೆ.೩- ಸರ್ಕಾರದ ವೈಫಲ್ಯಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರಿನಿಂದ ಆರಂಭಗೊಂಡಿದ್ದ ಪಾದಯಾತ್ರೆ,ಎರಡು ದಿನಗಳಲ್ಲಿ ಸುಮಾರು ೩೩ ಕಿಲೋಮೀಟರ್ ಕ್ರಮಿಸಿ ನಿನ್ನೆ ಮಸ್ಕಿಯ ಗುಡದೂರಿಗೆ ತಲುಪಿತ್ತು.ಇಂದು ಗುಡದೂರಿನಿಂದ ಸಿಂಧನೂರಿನ ಕೊನಟಗಿರಿ ಕ್ರಾಸ್‌ವರೆಗೆ ಸುಮಾರು ೧೮ ಕಿಲೋಮೀಟರ್ ಪಾದಯಾತ್ರೆ ಆರಂಭಗೊಂಡಿದೆ.
ಮೂರನೇ ದಿನದ ಪಾದಯಾತ್ರೆ ಸಂಪೂರ್ಣವಾಗಿ ರೈತ ಕೇಂದ್ರಿತವಾಗಿದ್ದು,ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಲಾಗಿದೆ.ಗುಡದೂರಿನ ಕರಿಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಎತ್ತಿನಗಾಡಿಯಲ್ಲಿ ಸಾಗುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ನೇಗಿಲನ್ನು ಹೆಗಲ ಮೇಲೆ ಹೊತ್ತುಕೊಂಡ ಬಿಜೆಪಿ ನಾಯಕರು, ರೈತರೊಂದಿಗೆ ಕೃಷಿ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದು, ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ರೈತ ಮಹಿಳೆಯರು ಸಿದ್ಧಪಡಿಸಿರುವ ಊಟವನ್ನು ವಿಜಯೇಂದ್ರ ಸವಿದರು
ಇಂದಿನ ಪಾದಯಾತ್ರೆ ವೇಳೆ ರೈತರೊಂದಿಗೆ ಬಿ.ವೈ. ವಿಜಯೇಂದ್ರ ಸಂವಾದ ನಡೆಸಲಿದ್ದು, ಬರ ಪರಿಸ್ಥಿತಿ, ಪರಿಹಾರ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಬಳಿಕ ಸಿಂಧನೂರಿನಲ್ಲಿ ಸಭೆ ನಡೆಸುವ ಮೂಲಕ ಇಂದಿನ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಪಾದಯಾತ್ರೆಯಲ್ಲಿ ರಾಜ್ಯಸಭಾ ಸದಸ್ಯ ಎಂ. ನಾಗರಾಜ್, ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಸಚಿವ ಶ್ರೀರಾಮುಲು, ಸಿ.ಸಿ. ಪಾಟೀಲ್, ದೊಡ್ಡನಗೌಡ ಪಾಟೀಲ್, ಚಂದ್ರು ಲಮಾಣಿ, ಬಸವರಾಜ್ ಮತ್ತಿಮೋಡ, ನಾರಾಯಣಸಾ ಭಾಂಡಗೆ, ಎ.ಎಸ್. ಪಾಟೀಲ್ ನಡಳ್ಳಿ, ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.
ಇನ್ನು ಹಸಿರು ಶಾಲು ಧರಿಸಿ ಹೆಜ್ಜೆ ಹಾಕುತ್ತಿರುವ ಬಿಜೆಪಿ ನಾಯಕರು, ಹಸಮಕಲ್ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಿ.ವೈ. ವಿಜಯೇಂದ್ರ ಹಾಗೂ ಶ್ರೀರಾಮುಲು ಸೇರಿದಂತೆ ಪ್ರಮುಖ ನಾಯಕರು ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿದರು.
ಒಟ್ಟಿನಲ್ಲಿ, ಮೂರನೇ ದಿನದ ಬಿಜೆಪಿ ಪಾದಯಾತ್ರೆ ಸಂಪೂರ್ಣವಾಗಿ ರೈತರ ಸಮಸ್ಯೆಗಳನ್ನೇ ಕೇಂದ್ರವಾಗಿಸಿಕೊಂಡಿದ್ದು, ರೈತರೊಂದಿಗೆ ಸಂವಾದ ನಡೆಸುವ ಮೂಲಕ ಸಿಂಧನೂರಿನತ್ತ ಸಾಗುತ್ತಿದೆ.































