
ತುಮಕೂರು, ಮೇ ೧೧- ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ಸ್ವಾತಂತ್ರ್ಯ ಭಾರತದ ರಾಷ್ಟ್ರಗೀತೆಯ ಜನಕ ರವೀಂದ್ರನಾಥ ಠಾಗೂರ್ ರವರ ಜನ್ಮದಿನಾಚರಣೆ ಹಾಗೂ ಸಮಾನತೆಯ ಬುನಾದಿ ಹಾಕಿಕೊಟ್ಟಂತಹ ಶಾಹು ಮಹರಾಜ್ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ಎನ್.ಕೆ. ನಿಧಿಕುಮಾರ್ ಮಾತನಾಡಿ, ನಮ್ಮ ಭಾರತ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ನದಿಗಳು, ಧರ್ಮಗಳನ್ನು ಒಗ್ಗೂಡಿಸಿ ನಾವೆಲ್ಲರೂ ಒಂದೇ ಭಾರತದ ಪ್ರಜೆಗಳು ಎಂಬ ಸಂದೇಶವನ್ನು ತೋರುವ ಗೀತೆಯನ್ನು ರಚಿಸಿದಂತಹ ಮಹಾನ್ ನಾಯಕ ರವೀಂದ್ರನಾಥ ಠಾಗೂರ್ ರವರು ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರಸ್ತುತ ಅವರು ನಮ್ಮೊಂದಿಗಿಲ್ಲ. ಆದರೆ ಅವರು ರಚಿಸಿರುವ ರಾಷ್ಟ್ರಗೀತೆಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಹ ಎದ್ದು ನಿಂತು ಗೌರವ ಸೂಚಿಸುವಂತಹ ಕಾರ್ಯವನ್ನು ಮಾಡಿರುವ ಮೇರು ನಾಯಕನೆಂದರೆ ತಪ್ಪಾಗಲಾರದು ಎಂದು ಹೇಳಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎನ್.ರವಿಕುಮಾರ್ ಮಾತನಾಡಿ, ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಸಮಾನತೆಯ ಬುನಾದಿ ಹಾಕಿ, ಸಾಮಾಜಿಕ ನ್ಯಾಯದ ಧ್ವಜವನ್ನು ಎತ್ತಿದ ರಾಜರ್ಷಿ ಶಾಹೂ ಮಹಾರಾಜರು ಕೇವಲ ಒಬ್ಬ ಆಡಳಿತಗಾರರಲ್ಲ; ಅವರು ಪರಿವರ್ತನೆಯ ಧ್ಯೇಯವಂತ ಯೋಧರಾಗಿದ್ದರು. ಕೊಲ್ಹಾಪುರ ಸಂಸ್ಥಾನದಲ್ಲಿ ಅವರು ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದು, ಬಹುಜನ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರತಿನಿಧಿತ್ವದ ಹಕ್ಕನ್ನು ನೀಡಿದರು. ಆ ಕಾಲದಲ್ಲೇ ಇದು ಕ್ರಾಂತಿಕಾರಿ ಸಾಮಾಜಿಕ ಸುಧಾರಣೆ ಮಾಡಿದಂತಹ ವ್ಯಕ್ತಿಗಳಾಗಿದ್ದರು ಎಂದು ಶಾಹು ಮಹರಾಜ್ ರವರ ಬಗ್ಗೆ ವಿಚಾರ ಧಾರೆಯನ್ನು ತಿಳಿಸಿದರು.
ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯ ಗೋವಿಂದರಾಜು ಕೆ. ಮಾತನಾಡಿ, ಶಾಹು ಮಹರಾಜ್ ರವರ ಸ್ಮೃತಿ ದಿನದ ಅಂಗವಾಗಿ, ಸಮಾನತೆ, ಭ್ರಾತೃತ್ವ ಮತ್ತು ಪ್ರಬೋಧನೆಯ ಅವರ ಚಿಂತನೆಗಳನ್ನು ಮುಂದುವರಿಸುವ ಸಂಕಲ್ಪ ಮಾಡೋಣ. ಅನ್ಯಾಯ, ಅಸಮಾನತೆ ಮತ್ತು ಭೇದ ಭಾವಗಳ ವಿರುದ್ಧ ಹೋರಾಡುವ ಪ್ರೇರಣೆ ಅವರಿಂದ ಸದಾ ಕಾಲ ದೊರೆಯುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್. ಕೆ. ನಿಧಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎಸ್., ಮುಖಂಡರುಗಳಾದ ಇಲಾಸ್ ಅಹಮ್ಮದ್, ರಂಗಸ್ವಾಮಯ್ಯ ಕೆ.ಎಸ್., ಗಂಗಾಧರ್ ಜಿ.ಆರ್., ಮೋಯಿನ್ ಅಹಮ್ಮದ್, ಹನುಮನರಸಯ್ಯ, ಮಾರ್ಕೆಟ್ ಮಣ್ಣಪ್ಪ, ತ್ಯಾಗರಾಜು, ಶಿವರಾಜ್, ಕಿರಣ್ ವೈ.ಎಸ್, ದಿಬ್ಬೂರು ಶ್ರೀನಿವಾಸ್, ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.


























