
ಬೀದರ್, ಜೂ.೩: ಸಿಂಧೋಲ ಗ್ರಾಮದ ಬಳಿ ಸುಮಾರು ೭ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಸೇತುವೆ ಕೇವಲ ಒಂದು ಅಭಿವೃದ್ಧಿ ಕಾಮಗಾರಿಯಲ್ಲ, ಸುತ್ತಮುತ್ತಲಿನ ೪೦ಕ್ಕೂ ಹೆಚ್ಚು ಗ್ರಾಮಗಳ ಜನರ ಬಹುಕಾಲದ ಕನಸಿನ ಸಾಕಾರವಾಗಿದೆ. ಮಳೆಗಾಲದಲ್ಲಿ ಜನರು ಅನುಭವಿಸುತ್ತಿದ್ದ ಸಂಚಾರದ ಸಂಕಷ್ಟಕ್ಕೆ ಈ ಸೇತುವೆ ಶಾಶ್ವತ ಪರಿಹಾರ ಒದಗಿಸಿದೆ ಎಂದು ಶಿ ವೀರೇಶ್ವರ ಶಿವಾಚಾರ್ಯ ಧನಾಶ್ರೀ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಸಿಂಧೋಲ ಗ್ರಾಮದ ಬಳಿ ನಿರ್ಮಿಸಲಾದ ಸೇತುವೆ ಲೋಕಾರ್ಪಣೆ ಹಿನ್ನೆಲೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಆಯೋಜಿಸಿದ್ದ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಸೇತುವೆ ಅತ್ಯಂತ ಉಪಯುಕ್ತವಾಗಿದೆ. ಈ ಮಹತ್ವದ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ಸಮರ್ಪಿಸಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಅಭಿವೃದ್ಧಿ ಪರ ಕಾಳಜಿಯನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇಂತಹ ಜನೋಪಯೋಗಿ ಯೋಜನೆಗಳು ಇನ್ನಷ್ಟು ಆಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು, “ಸಿಂಧೋಲ ಗ್ರಾಮದ ಬಳಿ ಮಳೆಗಾಲದಲ್ಲಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಸುಮಾರು ?೭ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯು ಸುತ್ತಮುತ್ತಲಿನ ಸುಮಾರು ೪೦ ಗ್ರಾಮಗಳ ಜನರಿಗೆ, ರೈತರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮಹತ್ತರ ಅನುಕೂಲ ಕಲ್ಪಿಸಿದೆ” ಎಂದರು.
“ಹಲವು ವರ್ಷಗಳ ಕಾಲ ಜನರು ಎದುರಿಸುತ್ತಿದ್ದ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿರುವ ಈ ಸೇತುವೆ ಗ್ರಾಮೀಣ ಅಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿದೆ. ಗ್ರಾಮಸ್ಥರು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿರುವುದು ಅಪಾರ ಸಂತಸ ತಂದಿದೆ. ಜನರ ವಿಶ್ವಾಸ, ಪ್ರೀತಿ ಹಾಗೂ ಆಶೀರ್ವಾದವೇ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆಯಾಗಿದೆ” ಎಂದು ಹೇಳಿದರು.
“ಬೀದರ್ ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿಯಾಗಿದೆ. ಮುಂದಿನ ದಿನಗಳಲ್ಲಿಯೂ ರಸ್ತೆ, ಸೇತುವೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಜನರ ಬದುಕನ್ನು ಇನ್ನಷ್ಟು ಸುಗಮಗೊಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಲಾಗುವುದು” ಎಂದು ಭರವಸೆ ನೀಡಿದರು.
ರೈತ ಭಗವಂತಪ್ಪ ಸಿಂಧೋಲ ಮಾತನಾಡಿ, “ಮಳೆಗಾಲದಲ್ಲಿ ನಮ್ಮ ಜಮೀನುಗಳಿಗೆ ತೆರಳುವುದು ತುಂಬಾ ಕಷ್ಟವಾಗುತ್ತಿತ್ತು. ಈಗ ಸೇತುವೆ ನಿರ್ಮಾಣದಿಂದ ಕೃಷಿ ಚಟುವಟಿಕೆಗಳು ಸುಗಮವಾಗಿವೆ. ನಮ್ಮ ಬಹುಕಾಲದ ಬೇಡಿಕೆ ಈಡೇರಿದೆ. ದಶಕಗಳ ಕಾಲ ಜನರು ಎದುರಿಸುತ್ತಿದ್ದ ಸಮಸ್ಯೆಗೆ ಇಂದು ಶಾಶ್ವತ ಪರಿಹಾರ ದೊರೆತಿದೆ. ಈ ಸೇತುವೆಯಿಂದ ವಿದ್ಯಾರ್ಥಿಗಳ ಶಿಕ್ಷಣ, ರೈತರ ಕೃಷಿ ಚಟುವಟಿಕೆಗಳು ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಅನುಕೂಲವಾಗಿದ್ದು, ಗ್ರಾಮೀಣ ಅಭಿವೃದ್ಧಿಗೆ ಹೊಸ ವೇಗ ಸಿಕ್ಕಿದೆ” ಎಂದು ಹೇಳಿದರು.
ಮುಖಂಡ ಶಿವಕುಮಾರ ಸಿಂಧೋಲ ಮಾತನಾಡಿ, “ಸುಮಾರು ೪೦ ಗ್ರಾಮಗಳ ಜನರ ಕನಸಾಗಿದ್ದ ಸೇತುವೆ ಇಂದು ನನಸಾಗಿದೆ. ಈ ಅಭಿವೃದ್ಧಿ ಕಾರ್ಯದಿಂದ ಜನರ ಜೀವನದಲ್ಲಿ ಮಹತ್ತರ ಬದಲಾವಣೆ ಬಂದಿದೆ. ಮಾನ್ಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುನಾಥ ರಾಜಗೀರ, ರಾಜರೆಡ್ಡಿ ಶಾಬಾದ, ಪ್ರಭು ಮೆಂಗಾ, ಮಾಣಿಕಪ್ಪ ಖಾಶೆಂಪುರ, ಸುರೇಶ ಮಾಶೆಟ್ಟಿ, ಶಿವಕುಮಾರ ಸ್ವಾಮಿ, ಜಗನಾಥ್ ಪಾಟೀಲ, ಚಂದ್ರಶೇಖರ ಶೇಖಾಪುರ, ಮಲ್ಲಿಕಾರ್ಜುನ ಮುತ್ತಂಗಿ, ಚಂದ್ರಯ್ಯ ಸ್ವಾಮಿ, ಸಂಜುಕುಮಾರ ಕೋಳಿ, ಘಾಳೇಪ್ಪ ಚಟನಳ್ಳಿ, ಶಿವಶರಣಪ್ಪ ತಗಾರೆ, ಜೋಸೆಫ್ ಕೊಡ್ಡೆಕರ್, ಹೇಮಾ ತುಕ್ಕಾರೆಡ್ಡಿ, ಸಂತೋಷಿ ನಿಡವಂಚಾ, ಸಂತೋಷರೆಡ್ಡಿ ಆಣದೂರ, ಜಗನ್ನಾಥ ಜಮಾದಾರ, ಶ್ರೀನಿವಾಸ ಪೊದ್ದಾರ, ಅನೀಲಕುಮಾರ ಪನ್ನಾಳೆ, ನಾರಾಯಣರೆಡ್ಡಿ, ಗುಂಡಪ್ಪ ಬುಧೇರಾ, ಕಾಶಿನಾಥ ಸಿಂಧೋಲ, ಸಂಗಯ್ಯ ಸ್ವಾಮಿ, ಭಗವಂತಪ್ಪ ಸಿಂಧೋಲ, ಶಂಕರೆಪ್ಪ ಬಾಪೂರ, ರಾಮು ರಾಠೋಡ್, ಜಗನ್ನಾಥ ರಾಜಗೀರ, ಮಂಜುನಾಥ ಸುಣಗಾರ, ರಾಜಕುಮಾರ ಯಾಕತಪುರ, ಪೀರಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


























