Home ಜಿಲ್ಲೆ ಗ್ರಾಹಕರು ಕಳೆದುಕೊಂಡ ೧,೦೦,೦೦೦ ಹಣ ಮರಳಿಸಿದ ಬ್ಯಾಂಕಿನ ಸಿಬ್ಬಂದಿ

ಗ್ರಾಹಕರು ಕಳೆದುಕೊಂಡ ೧,೦೦,೦೦೦ ಹಣ ಮರಳಿಸಿದ ಬ್ಯಾಂಕಿನ ಸಿಬ್ಬಂದಿ

ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೬ : ಇಲ್ಲಿನ ಜಲನಗರ ಎಸ್. ಬಿ. ಐ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರೊಬ್ಬರು ಕಳೆದುಕೊಂಡಿದ್ದ ೧ ಲಕ್ಷ ಹಣವನ್ನು ಬ್ಯಾಂಕ್ ಸಿಬ್ಬಂದಿ ತಕ್ಷಣವೇ ಪತ್ತೆ ಹಚ್ಚಿ ನೊಂದ ಗ್ರಾಹಕರಿಗೆ ಮರಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಾಮಾನ್ಯ ಬ್ಯಾಂಕಿAಗ್ ವ್ಯವಹಾರದ ಸಮಯದಲ್ಲಿ, ಗ್ರಾಹಕ ಆಲಮೇಲ ತಾಲೂಕಿನ ತಾವರಖೇಡ ಗ್ರಾಮದ ಪ್ರಗತಿಪರ ರೈತ ಯಲಗೊಂದಿ ಕಣ್ಣಪ್ಪ, ಶಿವನಗೌಡ ತಾವರಖೇಡ ಅವರು ಶಾಖೆಯಿಂದ ಹಿಂಪಡೆಯಲಾದ ಒಂದು ಲಕ್ಷ ಹಣವನ್ನು ಫೇಸಮಾಸ್ಕ್ ಧರಿಸಿದ ಅಪರಿಚಿತ ಮಹಿಳೆಯೊಬ್ಬರು ಕದ್ದಿದ್ದಾರೆ ಎಂದು ದೂರು ನೀಡಿದ್ದರು.
ದೂರು ಸ್ವೀಕರಿಸಿದ ತಕ್ಷಣ, ಶಾಖೆಯು ಸಿಸಿಟಿವಿ ದೃಶ್ಯಾವಳಿಗಳ ವಿವರವಾದ ಪರಿಶೀಲನೆಯನ್ನು ಬ್ಯಾಂಕಿನ ವ್ಯವಸ್ಥಾಪಕ ಪ್ರಕಾಶ್ ಗದಿಗೆಣ್ಣವರ ನೇತೃತ್ವದಲ್ಲಿ ಕೈಗೊಂಡು ಸಿಸಿ ಕ್ಯಾಮೆರಾ ಪುಟೇಜ್ ಪರಿಶೀಲನೆ ನಡೆಸಿದ್ದಾರೆ. ಆಗ ಮಹಿಳೆಯೊಬ್ಬಳು ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಆ ಮಹಿಳೆ ಬ್ಯಾಂಕಿಗೆ ಕೆ ವೈ ಸಿ ಮಾಡಿಸಲು ಬಂದಿದ್ದಳು. ಹಣ ಲಪಟಾಯಿಸುವ ಭರದಲ್ಲಿ ಮಹಿಳೆ ತನ್ನ ಆಧಾರ ಕಾರ್ಡ್ ಮರೆತು ಹೋಗಿದ್ದಳು. ಆಧಾರ ಕಾರ್ಡ್ ನಲ್ಲಿ ಇರುವ ಆ ಮಹಿಳೆಗೆ ಬ್ಯಾಂಕ್ ಸಿಬ್ಬಂದಿ ಫೋನ್ ಮಾಡಿ ಕಳುವು ಮಾಡಿದ ಹಣ ಮರಳಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಆಗ ಮಹಿಳೆ ತಕ್ಷಣವೇ ಬ್ಯಾಂಕಿಗೆ ಬಂದು ಕಳವು ಮಾಡಿದ ಹಣ ಮರಳಿಸಿದ್ದಾಳೆ.
ಶಾಖೆಯ ಸಿಬ್ಬಂದಿಗಳಾದ ಸಚಿನ್ ಎಸ್. ಕೆ., ಮತ್ತು ಅಮಿತ್ ಚಲವಾದಿ ಅವರ ಸಕ್ರಿಯ ಸಹಾಯದಿಂದ ತನಿಖೆಯನ್ನು ನಡೆಸಲಾಯಿತು.
ಸಿಸಿಟಿವಿ ವಿಶ್ಲೇಷಣೆ ಮತ್ತು ತ್ವರಿತ ಅನುಸರಣಾ ಕ್ರಮದ ಆಧಾರದ ಮೇಲೆ, ಕಳುವಾದ ಒಂದು ಲಕ್ಷ ಮೊತ್ತವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಮರುಪಡೆಯಲಾಗಿದೆ. ಸಂಪೂರ್ಣ ಮರುಪಡೆಯಲಾದ ಮೊತ್ತವನ್ನು ನಂತರ ಶಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಖೆಯ ಆವರಣದಲ್ಲಿ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.ಕಳೆದುಹೋದ ಮೊತ್ತವನ್ನು ಮರುಪಡೆಯಲು ಮತ್ತು ಹಿಂದಿರುಗಿಸಲು ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ತೆಗೆದುಕೊಂಡ ತ್ವರಿತ ಕ್ರಮಕ್ಕಾಗಿ ಗ್ರಾಹಕರು ತಮ್ಮ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.