Home ಜಿಲ್ಲೆ ಹುನ್ನೂರಿನಲ್ಲಿ ಬನಶಂಕರಿ ಜಾತ್ರೆ – ಸಿಡಿಮದ್ದು, ವಾದ್ಯಗಳೊಂದಿಗೆ ರಥೋತ್ಸವ

ಹುನ್ನೂರಿನಲ್ಲಿ ಬನಶಂಕರಿ ಜಾತ್ರೆ – ಸಿಡಿಮದ್ದು, ವಾದ್ಯಗಳೊಂದಿಗೆ ರಥೋತ್ಸವ

ಸಂಜೆ ವಾಣಿ ವಾರ್ತೆ
ಜಮಖಂಡಿ, ಮೇ ೩: ತಾಲೂಕಿನ ಹುನ್ನೂರು ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವವು ಭಕ್ತಿ ಹಾಗೂ ಸಂಭ್ರಮದ ನಡುವೆ ವಿಜೃಂಭಣೆಯಿAದ ಜರುಗಿತು.
ಗುರುವಾರ ಸಂಜೆ ೬ ಗಂಟೆಗೆ ರಥಕ್ಕೆ ಕಳಸಾರೋಹಣ ನೆರವೇರಿತು. ಶುಕ್ರವಾರ ವೈಶಾಖ ಶುದ್ಧ ಹುಣ್ಣಿಮೆ ಪ್ರಯುಕ್ತ ಬೆಳಿಗ್ಗೆ ೫.೩೦ಕ್ಕೆ ದೇವಿಗೆ ಅಭಿಷೇಕ ನಡೆಯಿತು. ಬಳಿಕ ೬ ಗಂಟೆಗೆ ಯಜ್ಞ, ಮಧ್ಯಾಹ್ನ ೧೨.೩೦ಕ್ಕೆ ಉಡಿತುಂಬುವ ಕಾರ್ಯಕ್ರಮಗಳು ನೆರವೇರಿದವು. ಸಂಜೆ ೬ ಗಂಟೆಗೆ ಬಣ್ಣಬಣ್ಣದ ಸಿಡಿಮದ್ದು ಹಾಗೂ ವಾದ್ಯಘೋಷಗಳ ನಡುವೆ ಶ್ರೀ ಬನಶಂಕರಿ ದೇವಿಯ ಮಹಾರಥೋತ್ಸವ ಭಕ್ತರ ಹರ್ಷೋದ್ಗಾರಗಳೊಂದಿಗೆ ನಡೆಯಿತು.
ಈ ರಥಕ್ಕೆ ಸುಮಾರು ೭೭ ವರ್ಷಗಳ ಇತಿಹಾಸವಿದೆ. ಆ ಕಾಲದಲ್ಲಿ ಹಣದ ಕೊರತೆಯ ನಡುವೆ ಗ್ರಾಮ ನೇಕಾರರು ತಮ್ಮ ಕೈಮಗ್ಗದಲ್ಲಿ ತಯಾರಿಸಿದ ಸೀರೆಗಳನ್ನು ಮಾರಾಟ ಮಾಡಿ ದೇವಸ್ಥಾನಕ್ಕೆ ಅರ್ಪಿಸಿದ ಹಣದಿಂದ ೧೯೪೯ರಲ್ಲಿ ರಥ ನಿರ್ಮಾಣ ಆರಂಭವಾಗಿ, ಜಮಖಂಡಿಯ ಬಡಿಗರ ಕೈಚಳಕದಿಂದ ೧೯೫೨ರಲ್ಲಿ ಭವ್ಯ ರಥ ನಿರ್ಮಾಣಗೊಂಡಿತು.
ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಿಯ ದರ್ಶನದಿಂದ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ರಥ ಎಳೆಯುವ ವೇಳೆ “ಶಂಭುಕೆ ಶಂಭುಕೆ” ಎಂಬ ಘೋಷಣೆಗಳು ಜಾತ್ರೆಗೆ ವಿಶೇಷ ಸೊಬಗು ನೀಡಿದವು.
ಶನಿವಾರ ಬೆಳಿಗ್ಗೆ ೯ ಗಂಟೆಗೆ ಗ್ರಾಮ ಪಂಚಾಯತ್ ಆವರಣದಲ್ಲಿ ಕರಡಿಮಜಲು, ಹಲಿಗೆ, ಸಂಬಾಳ ವಾದನ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ರಾತ್ರಿ ೧೦.೩೦ಕ್ಕೆ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ, ಜೇವರ್ಗಿ ತಂಡದಿAದ “ಮುತ್ತಿನಂಥ ಅತ್ತಿಗೆ” ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ರವಿವಾರ ರಾತ್ರಿ ೧೦.೩೦ಕ್ಕೆ “ಗಂಗಿ ಮನ್ಯಾಗ ಗೌರಿ ಹೊಲದಾಗ” ಸಾಮಾಜಿಕ ನಾಟಕ ಪ್ರದರ್ಶನ ಕೂಡ ನಡೆಯಲಿದೆ.
ರವಿವಾರ ಸಂಜೆ ೬ ಗಂಟೆಗೆ ಕಳಸಾವರೋಹಣ ನಡೆಯಲಿದ್ದು, ವೈಶಾಖ ಬಹುಳ ಚತುರ್ದಶಿ (ದಿ.೧೫) ರಂದು ಬೆಳಿಗ್ಗೆ ೧೧ ಗಂಟೆಗೆ ದೇವಿಯ ತೊಟ್ಟಿಲೋತ್ಸವ ಹಾಗೂ ಮಹಾಪ್ರಸಾದ ವ್ಯವಸ್ಥೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು