
ತುಮಕೂರು, ಮೇ ೧೧- ನಗರದ ಮಂಡಿಪೇಟೆಯ ಮಾರಿಯಮ್ಮ ದೇವಾಲಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವಂತೆ ಸ್ಲಂ ಸಮಿತಿ ಮಾರಿಯಮ್ಮ ಯುವಕರ ಸಂಘದ ವತಿಯಿಂದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ರವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಕನ್ನಿಕಾ ಪರಮೇಶ್ವರ್ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವೇಳೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.
ಮಂಡಿಪೇಟೆ ಮಾರಿಯಮ್ಮ ನಗರದಲ್ಲಿ ಕಳೆದ ೭೦ ವರ್ಷಗಳಿಂದ ಪರಿಶಿಷ್ಟ ಜಾತಿ ಪರೆಯನ್ ಸಮುದಾಯಕ್ಕೆ ಸೇರಿದ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ತುಮಕೂರು ಕಸಬಾ ಸರ್ವೇ ನಂ, ೧೨೦ರ ೩೮ ಗುಂಟೆ ಸರ್ಕಾರಿ ಜಾಗದ ಪೈಕಿ ನಮ್ಮ ಸಾಂಸ್ಕೃತಿಕ ಧಾರ್ಮಿಕತೆಯ ಶ್ರೀ ಮಾರಿಯಮ್ಮದೇವಿಯ ದೇವಸ್ಥಾನವಿದ್ದು, ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ ೮ ಗುಂಟೆ ಜಮೀನು ಸರ್ಕಾರಿ ಕರಾಬ್ ಆಗಿದ್ದು, ಈ ಜಮೀನನ್ನು ಮಂಜೂರು ಮಾಡಿಸಿ ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡುವಂತೆ ತುಮಕೂರು ಸ್ಲಂ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಮಾರಿಯಮ್ಮ ಯುವಕರ ಸಂಘದ ಪದಾಧಿಕಾರಿಗಳಾದ ಕಣ್ಣನ್, ಕೃಷ್ಣ, ರಾಜ, ಮಾರಿ, ಮಾಧವನ್, ತುಮಕೂರು ಸ್ಲಂ ಸಮಿತಿಯ ಅರುಣ್ ಸಚಿವರಿಗೆ ಮನವಿ ಸಲ್ಲಿಸಿದರು.
ತುಮಕೂರು ಸ್ಲಂ ಸಮಿತಿಯ ಎ.ನರಸಿಂಹಮೂರ್ತಿ ಈ ಸಂಬಂಧ ಈಗಾಗಲೇ ದಿನಾಂಕ: ೨೯-೯-೨೦೨೨ ರಂದು ತುಮಕೂರು ಆಶ್ರಯ ಸಮಿತಿ ಸಭೆಯಲ್ಲಿ ದೇವಸ್ಥಾನಕ್ಕೆ ಜಾಗ ಮಂಜೂರು ಮಾಡಲು ಹಾಗೂ ತುಮಕೂರು ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸಭೆಯಲ್ಲೂ ಸಹ ದೇವಸ್ಥಾನ ಜಾಗವನ್ನು ಹೊರತುಪಡಿಸಿ ಉಳಿದ ಪ್ರದೇಶವನ್ನು ನಗರ ಪಾಲಿಕೆ ಹಸ್ತಾಂತರಿಸಲು ತೀರ್ಮಾನವಾಗಿರುತ್ತದೆ. ಆಧ್ದರಿಂದ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ ಸದರಿ ದೇವಸ್ಥಾನದ ಜಾಗವನ್ನು ಮಂಜೂರು ಮಾಡುವಂತೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಇವರ ಮನವಿಗೆ ಸ್ಪಂದಿಸಿದ ಸಚಿವ ಡಾ. ಜಿ. ಪರಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೆ ನಿರ್ದೇಶನ ನೀಡಿ ದೇವಸ್ಥಾನದ ಜಾಗ ಮಂಜೂರು ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಭೆ ಕರೆಯುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಯುವಭೀಮ ಪಡೆಯ ಪದಾಧಿಕಾರಿಗಳು ಮತ್ತು ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


























