
ಚಿಂಚೋಳಿ,ಮೇ 5: ಇತ್ತೀಚೆಗೆ ತಾಲೂಕಿನ ಅಸೂಟಿ ಹಾಗೂ ಕೊತಬಾಲ ಎರಡು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ ಸೇರಿ) ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂಹುಸೇನ ಕರಡಿಗುಡ್ಡ
ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಉನ್ನತಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಅವರ ಕುಟುಂಬಕ್ಕೆ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು, ಬಾಕಿ ವೇತನವನ್ನು ತಕ್ಷಣವೇ
ಬಿಡುಗಡೆಮಾಡಬೇಕು ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಚಿಂಚೋಳಿ ತಾಲೂಕ ಪಂಚಾಯಿತಿಗೆ ಆಗಮಿಸಿದ ಜಿಪಂ ಸಿಇಒ ಭಂವರ್‍ಸಿಂಗ್ ಮೀನಾ, ಅವರಿಗೆ ತಾಲೂಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿಸಂಘದ ಅಧ್ಯಕ್ಷ ಪವನ ಕುಮಾರ ಮೈತ್ರಿ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯದ ಎಲ್ಲಾ ಗ್ರಾ.ಪಂ. ಗಳಲ್ಲಿ ಪಿಡಿಒಗಳಿಗೆ ಒತ್ತಡ ರಹಿತವಾಗಿ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಬೇಕು. ಸಿಬ್ಬಂದಿ ಕೊರತೆ ನೆಪದಲ್ಲಿ ಒಬ್ಬರೇ ಅಧಿಕಾರಿಗೆ ಎರಡೆರಡು ಪಂಚಾಯತಿಗಳ ಹೆಚ್ಚುವರಿ ಹೊರೆನೀಡುವುದನ್ನು ತಪ್ಪಿಸಬೇಕು. ಕ್ಷುಲ್ಲಕಕಾರಣಗಳಿಗೆ ಅಮಾನತು ನಿಲ್ಲಬೇಕು ಸಣ್ಣಪುಟ್ಟ ಆಡಳಿತಾತ್ಮಕ ಕಾರಣಗಳಿಗೆ ಅಥವಾ ರಾಜಕೀಯ ಒತ್ತಡಗಳಿಗೆ ಮಣಿದು ಪಿಡಿಒಗಳನ್ನು ಏಕಾಏಕಿ ಅಮಾನತು ಮಾಡುವ ಅವೈಜ್ಞಾನಿಕ ಪದ್ಧತಿಯನ್ನು ಕೂಡಲೇಕೈಬಿಡಬೇಕು ಕಾಲಮಿತಿಯೊಳಗೆ ತನಿಖೆ ಹಾಗೂ ಅಮಾನತು ತೆರವು ಯಾವುದೇ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಅಥವಾ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದರೆ, ಅದನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ವಿಚಾರಣೆ ನೆಪದಲ್ಲಿ ತಿಂಗಳುಗಟ್ಟಲೆ ಅಮಾನತಿನಲ್ಲಿಟ್ಟು, ಸ್ಥಳ ನಿಯುಕ್ತಿಗೊಳಿಸದೆ, ವೇತನವೂ ನೀಡದೆ ಅಧಿಕಾರಿಗಳನ್ನು ಮತ್ತು ಅವರ ಕುಟುಂಬವನ್ನು ಉಪವಾಸ ಕೆಡವುವ ವ್ಯವಸ್ಥೆ ಬದಲಾಗಬೇಕು. ವಿಚಾರಣಾ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಕಡ್ಡಾಯವಾಗಿ ಹಾಗೂ ಸಕಾಲದಲ್ಲಿ ಪಾವತಿಸಬೇಕು ಮೀನಾಕ್ಷಿ ಸುಂದರಂ ಸಮಿತಿ ವರದಿ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕನೌಕರರ ಸುರಕ್ಷತೆ ಮತ್ತು ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಪವನ ಮೇತ್ರಿ ಅವರು ಹೇಳಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಗೋವಿಂದ ರೆಡ್ಡಿ, ಕಾರ್ಯದರ್ಶಿಗಳಾದ ರಾಮಕೃಷ್ಣ, ಗ್ರಾಮ ಪಂಚಾಯತ್ ಅಭಿವೃದ್ಧಿ ಸಂಘದ ಸದಸ್ಯರಾದ ರಮೇಶ್ ತುಮಕುಂಟ, ಹಿರೋಸಿನ ಚೌವ್ಹಾಣ, ಸುನೀಲ ರಟಕಲ,ಮಲ್ಲಿಕಾರ್ಜುನ ಗಿರಿ, ಶಾಂತಪ್ಪ, ವಿನೋದ, ಮತ್ತು ಅನೇಕ ಗ್ರಾಮ ಪಂಚಾಯತ್ ಅಭಿವೃದ್ಧಿ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ವಿವಿಧ ನೌಕರ ಸಂಘದ ಸದಸ್ಯರು ಇದ್ದರು






















