
ಕೋಲಾರ,ಮಾ.೦೫: ಖಾಸಗಿ ಶಿಕ್ಷಣ ಸಂಸ್ಥೆಗಳು ಇಚ್ಛೆಯಂತೆ ಅವರ ಪಠ್ಯಕ್ರಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಭೋದಿಸಲು ಅನುವು ಮಾಡಿಕೊಡಬೇಕೆಂದು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾಧ್ಯಕ್ಷ ವಿ.ರಂಜಿತ್‌ಕುಮಾರ್ ಮಾತನಾಡಿ, ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಅಪಾರ ಸೇವೆಯನ್ನು ನೀಡುತ್ತಾ, ಕರ್ನಾಟಕ ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅಪಾರ ಶ್ರಮವನ್ನು ವಹಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಕಾಯ್ದುಕೊಳ್ಳಲು ಆಧುನೀಕರಿಸಿರುವ ಪಠ್ಯಕ್ರಮ ಬಹಳ ಅಗತ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಈ ಕಾಲಕ್ಕೆ ತಕ್ಕಂತೆ ಪಠ್ಯಕ್ರಮವನ್ನು ನೀಡುತ್ತಾ ಬಂದಿದೆ. ಆದರೆ ಇತ್ತೀಚಿಗೆ ಶಾಲಾ ಶಿಕ್ಷಣ ಇಲಾಖೆ ಕಡ್ಡಾಯವಾಗಿ ಇಲಾಖೆ ನೀಡುವ ಪಠ್ಯಕ್ರಮವನ್ನು ಭೋದಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ, ಅದರೆ ಇಲಾಖೆ ನೀಡುವ ಪಠ್ಯಕ್ರಮ ಸಿದ್ದಪಡಿಸಿ ಅನೇಕ ವರ್ಷಗಳಾಗಿದ್ದು, ಗುಣಮಟ್ಟ ಶೈಕ್ಷಣಿಕ ಪ್ರಗತಿಗೆ ತೊಡಕುಂಟಾಗಿದೆ. ಪೋಷಕರು ಸಹ ತಮ್ಮ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಉನ್ನತ ಮತ್ತು ಉತ್ತಮ ಮಟ್ಟದ ಪಠ್ಯಕ್ರಮವನ್ನು ಶಾಲೆಗಳಲ್ಲಿ ಭೋದಿಸಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿರುತ್ತಾರೆ ಎಂದು ವಿವರಿಸಿದರು.
ಹಾಗಾಗಿ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಕನ್ನಡ ಭಾಷಾ ಪಠ್ಯಪುಸ್ತಕವನ್ನು ಇಲಾಖೆಯಲ್ಲಿ ಪಡೆದುಕೊಳ್ಳಲು ಅವಕಾಶ ನೀಡಿ ಇನ್ನುಳಿದ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಇಚ್ಚೆಯಂತೆ ಅವರ ಪಠ್ಯಕ್ರಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಭೋದಿಸಲು ಅನುವುಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ, ಅದೇ ರೀತಿ ಸಂಸ್ಥೆಗಳು ಪಠ್ಯಪುಸ್ತಕ ಎಸ್.ಎ.ಟಿ.ಎಸ್ ನಲ್ಲಿ ಖಾಸಗಿ ಶಿಕ್ಷಣ ಬೇಡಿಕೆಗಳನ್ನು ಸಲ್ಲಿಸುವ ರೀತಿಯನ್ನು ಪರಿಗಣಿಸಿ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಇನ್ನಷ್ಟು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಪ್ರೋತ್ಸಾಹ ನೀಡಬೇಕಾಗಿ ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯಾಧ್ಯಕ್ಷ ಎಸ್.ಮುನಿಯಪ್ಪ, ಪದಾಧಿಕಾರಿ ರಾಮಪ್ಪನಾಯಕ್, ಕೋಲಾರ ತಾಲೂಕು ಅಧ್ಯಕ್ಷ ಫಲ್ಗುಣ, ಜಿಲ್ಲಾ ಉಪಾಧ್ಯಕ್ಷ ಕೆ.ರಾಜೇಶ್ ಸಿಂಗ್, ಎಸ್.ಎಸ್.ವಿ.ಎಂ ಶಿಕ್ಷಣ ಸಂಸ್ಥೆಯ ಮರಿಜೋಗಿ, ಬಂಗಾರಪೇಟೆ ಅಕ್ಷರಧಾಮ ಶಿಕ್ಷಣ ಸಂಸ್ಥೆಗಳ ಪ್ರಶಾಂತ್ ಆರ್ ಇದ್ದರು.
























