
ಬೆಂಗಳೂರು, ಜೂ.೧೬:ಖಾತೆ ಹಂಚಿಕೆಯಾಗಿ ೧೩ ದಿನಗಳ ಬಳಿಕ ಕೊನೆಗೂ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡರು. ಪೂರ್ಣ ಪ್ರಮಾಣದ ಅಧಿಕಾರ ನೀಡದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರ ಸ್ವೀಕಾರದಿಂದ ದೂರ ಉಳಿದಿದ್ದ ಅವರು, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ನಡೆದ ಸಂಧಾನದ ಬಳಿಕ ಇಂದು ಅಧಿಕಾರ ವಹಿಸಿಕೊಂಡರು.
ಜಿಬಿಎ ಕೇಂದ್ರ ಕಚೇರಿಗೆ ಆಗಮಿಸಿದ ಸಚಿವರು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಐದು ನಗರ ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮೊದಲ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲೇ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.
ಖಾತೆ ಹಂಚಿಕೆ ವೇಳೆ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳಾದ ಬಿಡಿಎ ಹಾಗೂ ಬಿಎಂಆರ್‌ಡಿಎ ಅಧಿಕಾರಗಳನ್ನು ತಮ್ಮ ವ್ಯಾಪ್ತಿಗೆ ನೀಡದಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಭೇಟಿಯೂ ನಡೆದಿತ್ತು. ಬಳಿಕ ಸುರ್ಜೆವಾಲ ಅವರೊಂದಿಗೆ ನಡೆದ ಮಾತುಕತೆಯ ನಂತರ ಇಂದು ಅಧಿಕಾರ ಸ್ವೀಕರಿಸುವ ಮೂಲಕ ರಾಜಕೀಯ ಬಿಕ್ಕಟ್ಟಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಸಂದೇಶ:
ಮೊದಲ ದಿನವೇ ಅಧಿಕಾರಿಗಳಿಗೆ ಖಡಕ್ ಸಂದೇಶ
ಸಭೆಯಲ್ಲಿ ನಗರದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದ ಸಚಿವರು, ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡುವಂತೆ ಸೂಚಿಸಿದರು.
ಮಳೆಯ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ಹೆಚ್ಚಾಗಿರುವ ಗುಂಡಿಗಳನ್ನು ಕೂಡಲೇ ಮುಚ್ಚಬೇಕು. ಇ-ಖಾತಾ ಯೋಜನೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸಕ್ಕೆ ವೇಗ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ, ಕೆರೆಗಳ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಕಂದಾಯ ವಸೂಲಿ, ಬಾಕಿ ತೆರಿಗೆ ಸಂಗ್ರಹ ಹಾಗೂ ಇ-ಖಾತಾ ಅರ್ಜಿಗಳ ಪ್ರಗತಿ ಕುರಿತು ಸಚಿವರು ವಿವರವಾದ ಮಾಹಿತಿ ಪಡೆದರು.
ರಾಜಕಾಲುವೆ ಸಮಸ್ಯೆಗೆ ಎಚ್ಚರಿಕೆ
ಮಳೆ ಬಂದಾಗ ರಾಜಕಾಲುವೆಗಳ ನೀರು ರಸ್ತೆಗೆ ಹರಿಯುವ ಪರಿಸ್ಥಿತಿ ಮುಂದುವರಿದರೆ ಸಂಬಂಧಪಟ್ಟ ಇಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು. ನಗರದಲ್ಲಿನ ೭೫ ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಇದರ ಜೊತೆಗೆ ಪ್ರೀಮಿಯಂ ಎಫ್‌ಎಆರ್, ಶಿಕ್ಷಣ ಹಾಗೂ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ಸುಧಾರಣೆ, ಕಸ ನಿರ್ವಹಣೆ, ಘನತ್ಯಾಜ್ಯ ನಿರ್ವಹಣಾ ಶುಲ್ಕ ಸಂಗ್ರಹ, ಜಿಬಿಎ ಕಾಯ್ದೆಯ ಅನುಷ್ಠಾನ, ಒತ್ತುವರಿ ಕಟ್ಟಡಗಳಿಗೆ ನೋಟಿಸ್ ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಕಲ್ಯಾಣ ಯೋಜನೆಗಳಿಗೆ ವೇಗ
’ನಮ್ಮ ಕ್ಲಿನಿಕ್’ ಹಾಗೂ ’ಇಂದಿರಾ ಕ್ಯಾಂಟೀನ್’ ಯೋಜನೆಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಸೂಚಿಸಿದ ಸಚಿವರು, ಕಲ್ಯಾಣ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ ಯೋಜನೆಗಳ ಪಟ್ಟಿ ಪರಿಶೀಲಿಸಿ, ಬಾಕಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಟ್ಟಾರೆ, ಹಲವು ದಿನಗಳ ರಾಜಕೀಯ ಅಸಮಾಧಾನದ ಬಳಿಕ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಅಧಿಕಾರ ವಹಿಸಿಕೊಂಡ ಕೃಷ್ಣ ಬೈರೇಗೌಡ, ಮೊದಲ ದಿನವೇ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ, ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರ ಹಾಗೂ ಅಧಿಕಾರಿಗಳ ಹೊಣೆಗಾರಿಕೆಗೆ ಒತ್ತು ನೀಡಿ ಆಡಳಿತಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ.





























