
ಚಿಟಗುಪ್ಪಾ :ಮೇ.4:ತಾಲೂಕಿನ ಚಾಂಗಲೇರಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ 2570ನೇ ಬುದ್ಧ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಬುದ್ಧರು ಪ್ರತಿಯೊಬ್ಬರೂ ಸ್ವಯಂ ಪ್ರಕಾಶಿತರಾಗಲು ಮಾರ್ಗ ತೋರಿಸಿದ್ದಾರೆ. ಗುರಿ ಹಾಗೂ ಶ್ರದ್ಧೆಯಿಂದ ಶ್ರಮಿಸಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು. ಅಹಂಕಾರವನ್ನು ಬಿಟ್ಟು ಕರುಣೆ ಮತ್ತು ಪ್ರೀತಿಯಿಂದ ಸರಳ ಜೀವನ ನಡೆಸುವಂತೆ ಬುದ್ಧರ ಸಂದೇಶವನ್ನು ಪಾಲಿಸುವಂತೆ ಕರೆ ನೀಡಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ವೈಜ್ಞಾನಿಕ ಧಮ್ಮವನ್ನು ಪರಿಚಯಿಸಿದ್ದು, ಅವರ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ತಿಳಿಸಿದರು. ಅಂಬೇಡ್ಕರ್ ಅವರು ಜ್ಞಾನ ಸಂಪಾದನೆಗಾಗಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದ್ದ ಗ್ರಂಥಾಲಯ ನಿರ್ಮಿಸಿದ್ದನ್ನು ಉಲ್ಲೇಖಿಸಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಿ ಓದು ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಭಂತೆ ಧಮ್ಮ ದೀಪ ಅವರ ಸಾನಿಧ್ಯದಲ್ಲಿ ತ್ರೀಶರಣ ಪಂಚಶೀಲ ಪಠಣ ನಡೆಯಿತು.
ವಿಶೇಷ ಭಾಷಣಕಾರರಾದ ಬುದ್ಧ-ಬಸವ-ಅಂಬೇಡ್ಕರ್ ವಿಚಾರವಾದಿ ಶಿವಶರಣಪ್ಪ ಹುಗ್ಗಿ ಪಾಟೀಲ ಅವರು ಮಾತನಾಡಿ, ಬುದ್ಧರು ಪ್ರಾಣಿ, ಪಕ್ಷಿ ಸೇರಿದಂತೆ ಸಕಲ ಜೀವಿಗಳಿಗೆ ಕರುಣೆ ತೋರಿದ ಪ್ರಥಮ ಗುರು ಎಂದು ಹೇಳಿದರು. ಧ್ಯಾನ ಮಾರ್ಗವನ್ನು ವಿಶ್ವಕ್ಕೆ ಪರಿಚಯಿಸಿದ ಬುದ್ಧರು ಮಾನವ ಕಲ್ಯಾಣಕ್ಕಾಗಿ ದುಃಖದ ಮೂಲ ಕಾರಣವನ್ನು ವಿವರಿಸಿದ ಮಹಾನ್ ತತ್ವಜ್ಞರಾಗಿದ್ದಾರೆ ಎಂದು ತಿಳಿಸಿದರು.
ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿಜವಾದ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಯುವಕರು ಡಿ.ಜೆ ಕಾರ್ಯಕ್ರಮಗಳಲ್ಲಿ ಮಾತ್ರ ಸಕ್ರಿಯರಾಗದೆ, ವಿಚಾರಮೂಲಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಪ್ರೇಮಸಾಗರ ದಾಂಡೆಕರ್ ಅವರು ಮಾತನಾಡಿ, ಬುದ್ಧರ ತತ್ವಗಳನ್ನು ವಿಶ್ವವೇ ಅನುಸರಿಸುತ್ತಿದ್ದು, ನಮ್ಮ ಇತಿಹಾಸವನ್ನು ಅರಿತುಕೊಂಡು ಸಮಗ್ರ ಅಭಿವೃದ್ಧಿಯತ್ತ ಸಾಗಬೇಕೆಂದು ಹೇಳಿದರು.
ತಾಳಮಡಗಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹಣಮಂತರಾವ ಗೌಡಗಾಂವಕರ್ ಅವರು ಬುದ್ಧ ಜಯಂತಿಯನ್ನು ವರ್ಷಕ್ಕೊಮ್ಮೆ ಆಚರಿಸುವುದಕ್ಕಿಂತ, ಬುದ್ಧರ ತತ್ವಗಳನ್ನು ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೆಮಳಖೇಡಾ ಪೆÇಲೀಸ್ ಠಾಣೆಯ ಪಿ.ಎಸ್.ಐ ಸವೀತಾ ಪ್ರೀಯಾಂಕ್, ಜೈಸಿಂಗ್ ರಾಠೋಡ, ಬಸವರಾಜ ಪವಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಾಗರ ವಹಿಸಿದ್ದರು.
ಕಾರ್ಯಕ್ರಮವನ್ನು ಮಿಥುನ್ ವರ್ಮಾ ನಿರೂಪಿಸಿದರು. ಅರ್ಜುನ ಶರ್ಮಾ ಸ್ವಾಗತಿಸಿದರು. ಪ್ರಕಾಶ ಪ್ರಸಾದ್ ವಂದಿಸಿದರು






















