
ಇಂದಿನಿಂದ ಜಾರಿ
ನವದೆಹಲಿ, ನ.೯-ದೇಶಾದ್ಯಂತ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ದುಬಾರಿ ಔಷಧಿಗಳ ಬೆಲೆಯಿಂದ ತತ್ತರಿಸಿದ್ದ ರೋಗಿಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟು ೫೪೩ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು ಕಡಿತಗೊಳಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.
ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾ ಲಯದ ಅಧೀನದಲ್ಲಿರುವ ಔಷಧ ಇಲಾಖೆ ಈ ಕ್ರಮವನ್ನು ಪ್ರಕಟಿಸಿದೆ.
ಕೇಂದ್ರ ಸರ್ಕಾರ ಅಕ್ಟೋಬರ್ ೧೭ರಂದು ೧೩೭ ವಿಧದ ಕ್ಯಾನ್ಸರ್ ಔಷಧಿಗಳ ಮೇಲಿನ ವ್ಯಾಪಾರ ಮಾರ್ಜಿನ್ಗೆ ಶೇ.೩೦ರ ಮಿತಿ ವಿಧಿಸಿತ್ತು. ಔಷಧ ತಯಾರಕರಿಂದ ವಿತರಕರು, ಔಷಧ ವ್ಯಾಪಾರಿಗಳು ಮತ್ತು ಆಸ್ಪತ್ರೆಗಳವರೆಗೆ ವಿಧಿಸಲಾಗುತ್ತಿದ್ದ ಹೆಚ್ಚಿನ ಲಾಭಾಂಶವನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ.
ಇದರ ಪರಿಣಾಮವಾಗಿ ೫೪೩ ಔಷಧಿ ಬ್ರ್ಯಾಂಡ್ಗಳ ಬೆಲೆ ಇಳಿಕೆಯಾಗಿದ್ದು, ಕೆಲವು ಔಷಧಿಗಳ ಬೆಲೆ ಶೇ.೯೦ಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ.
ಕೆಲವು ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ
ಈವರೆಗೆ ೭೬ ಔಷಧ ತಯಾರಿಕಾ ಕಂಪನಿಗಳು ೧,೨೨೫ ಕ್ಯಾನ್ಸರ್ ಔಷಧಿ ಫಾರ್ಮುಲೇಷನ್ಗಳ ಪರಿಷ್ಕೃತ ಬೆಲೆಗಳನ್ನು ವರದಿ ಮಾಡಿವೆ. ಇವುಗಳಲ್ಲಿ ೧,೦೩೧ ಔಷಧಿಗಳ ಬೆಲೆ ಕಡಿಮೆಯಾಗಿದೆ. ಸುಮಾರು ೬೦೦ ಬ್ರ್ಯಾಂಡ್ಗಳ ಬೆಲೆ ಶೇ.೫೦ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಗರಿಷ್ಠ ಬೆಲೆ ಇಳಿಕೆ ಶೇ.೯೬.೪೫ರಷ್ಟಿದೆ.
ರೋಗಿಗಳಿಗೆ ಏನು ಪ್ರಯೋಜನ?
ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಂದರ್ಭದಲ್ಲಿ ಔಷಧಿಗಳ ಬೆಲೆ ಇಳಿಕೆ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ದೊಡ್ಡ ಆರ್ಥಿಕ ನೆರವಾಗಲಿದೆ. ವಿಶೇಷವಾಗಿ ದೀರ್ಘಕಾಲ ಔಷಧಿಗಳನ್ನು ಬಳಸಬೇಕಾದ ರೋಗಿಗಳಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲವಾಗಲಿದೆ.
ಈ ಔಷಧಿಗಳ ದರ ಇಳಿಕೆ
ಪಾಲ್ಬೊಪ್ರೊ ೪೦,೪೨೧ ರೂ.ನಿಂದ ೨,೭೨೦ ರೂ.ಗೆ ಇಳಿಕೆ.
ಸ್ಯಾಮ್ಟೆಪಾ ೮೦,೦೭೧ ರೂ.ನಿಂದ ೭,೧೫೦ ರೂ.ಗೆ ಇಳಿಕೆ.
ಅಜಾಸಿಟಿನ್ ೬,೩೩೭ ರೂ.ನಿಂದ ೧,೪೯೫ ರೂ.ಗೆ ಇಳಿಕೆ.
ಡೆಸಾನಾಟ್ ೨,೮೧೨ ರೂ.ನಿಂದ ೧,೦೮೫ ರೂ.ಗೆ ಇಳಿಕೆ.
























