
ಭೋಪಾಲ್, ನ.೯-ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸುತ್ತಿರುವ ಹೊತ್ತಲ್ಲೇ ಮಧ್ಯಪ್ರದೇಶದಲ್ಲಿ ಸಂಭವಿಸಿದ ಎರಡು ಭೀಕರ ಅಗ್ನಿ ಅವಘಡಗಳಲ್ಲಿ ಹಸಗೂಸು, ಮಕ್ಕಳು ಸೇರಿ ೧೨ ಮಂದಿ ಮೃತಪಟ್ಟಿದ್ದಾರೆ.
ಕಟ್ನಿ ಮತ್ತು ಸಿಯೋನಿ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಗ್ನಿ ದುರಂತಗಳಲ್ಲಿ ಕುಟುಂಬಗಳ ಸಂತೋಷವನ್ನೇ ಕಸಿದುಕೊಂಡಿದ್ದು ಸ್ಮಶಾನ ಮೌನ ಆವರಿಸಿದೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರಹಿ ಪಟ್ಟಣದಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಮೂರು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿದ್ದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಕಟ್ಟಡದ ಮೇಲಿನ ಮಹಡಿಗಳಿಗೂ ವ್ಯಾಪಿಸಿದೆ.
ಈ ಕಟ್ಟಡದಲ್ಲೇ ವಾಸವಿದ್ದ ಕುಟುಂಬದ ಆರು ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ೭೭ ವರ್ಷದ ಪುರನ್ ಅಗರ್ವಾಲ್, ಅವರ ಪತ್ನಿ ಚಂದ್ರಕಲಾ (೭೪), ಸೊಸೆ ಪೂನಂ, ಮೊಮ್ಮಕ್ಕಳಾದ ಆರ್ಯ (೧೪), ಅನ್ವಿ (೬) ಹಾಗೂ ಕೇವಲ ಎರಡು ತಿಂಗಳ ಹಸುಗೂಸು ಎಂದು ಗುರುತಿಸಲಾಗಿದೆ.
ದುರಂತದ ಅತ್ಯಂತ ಹೃದಯವಿದ್ರಾವಕ ಸಂಗತಿಯೆಂದರೆ, ಎರಡು ತಿಂಗಳ ಮಗು ತಾಯಿಯ ಮಡಿಲಲ್ಲೇ ಕೊನೆಯುಸಿರೆಳೆದಿದೆ.
ಸಿಯೋನಿಯಲ್ಲಿ ಮತ್ತೊಂದು ಭೀಕರ ದುರಂತ
ಇನ್ನೊಂದೆಡೆ, ಸಿಯೋನಿ ಜಿಲ್ಲೆಯ ಛಪಾರಾ ಪಟ್ಟಣದ ಮಹಾವೀರ್ ವಾರ್ಡ್ನಲ್ಲಿ ಸೋಮವಾರ ಬೆಳಗಿನ ಜಾವ ೪ರಿಂದ ೪.೩೦ರ ಸುಮಾರಿಗೆ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.
ಚಿನ್ನಾಭರಣ ವ್ಯಾಪಾರಿ ಕುಂದನ್ ಲಾಲ್ ಸೋನಿ ಅವರ ಮೂರು ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಸಂದರ್ಭದಲ್ಲಿ ಮನೆಯಲ್ಲಿ ಒಟ್ಟು ೧೦ ಮಂದಿ ಇದ್ದರು. ಅವರಲ್ಲಿ ಆರು ಮಂದಿ ಮೃತಪಟ್ಟಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.
ಮೃತರನ್ನು ಕುಂದನ್ ಲಾಲ್ ಸೋನಿ (೭೫), ಅವರ ಪತ್ನಿ ರಾಜಕುಮಾರಿ (೬೫), ರಿತು (೪೨), ಸ್ಮೃತಿ (೪೦), ಸೂರ್ಯ (೪೫) ಮತ್ತು ಆದಿತ್ಯ (೧೬) ಎಂದು ಗುರುತಿಸಲಾಗಿದೆ.
ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಜೆ ದೌಡಾಯಿಸಿ ಬೆಂಕಿಯನ್ನು ನಂದಿಸಿತು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
























