
ಬೆಂಗಳೂರು, ನ. ೯- ಇಡೀ ದೇಶ ದೀಪಾವಳಿ ಸಂಭ್ರಮದಲ್ಲಿರುವಾಗಲೇ ಪಟಾಕಿ ಅವಘಡಗಳು ನಡೆದಿದ್ದು, ದೆಹಲಿಯಲ್ಲಿ ಪಟಾಕಿ ಸಿಡಿದು ೧೦ ವರ್ಷದ ಬಾಲಕ ಮೃತಪಟ್ಟಿರುವ ಧಾರುಣ ಘಟನೆ ನಡೆದಿದ್ದರೆ, ರಾಜ್ಯದಲ್ಲೂ ಹಲವೆಡೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.
ರಾಜಧಾನಿ ಬೆಂಗಳೂರಿನಲ್ಲಿ ೪೨ ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದೇ ದೊಡ್ಡ ಸಂಭ್ರಮ. ಎಷ್ಟೇ ಎಚ್ಚರಿಕೆ ವಹಿಸಿದರೂ ಅವಘಡಗಳು ಸಂಭವಿಸುತ್ತಲೇ ಇವೆ.
ದೆಹಲಿಯಲ್ಲಿ ೧೦ ವರ್ಷದ ಬಾಲಕ ತನ್ನ ಕೈಯಲ್ಲಿ ಪಟಾಕಿ ಹಿಡಿದು ಸಿಡಿಸಲು ಮುಂದಾದಾಗ ಅನಿರೀಕ್ಷಿತವಾಗಿ ಆತನ ಕೈಯಲ್ಲೇ ಪಟಾಕಿ ಸ್ಫೋಟಗೊಂಡಿದೆ.
ಪಟಾಕಿಯ ಸ್ಫೋಟದ ತೀವ್ರತೆಗೆ ಬಾಲಕ ಕೈ ಮತ್ತು ದೇಹದ ಮೇಲ್ಭಾಗಕ್ಕೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಕೂಡಲೇ ಬಾಲಕನ ಕುಟುಂಬಸ್ಥರು ಹಾಗೂ ನೆರೆ ಹೊರೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಫೋಟಕ್ಕೆ ಪಟಾಕಿ ಕಾರಣವೇ, ಪಟಾಕಿಯ ಗುಣಮಟ್ಟ ಎಲ್ಲದರ ಬಗ್ಗೆಯೂ ತನಿಖೆ ನಡೆಸಿದ್ದಾರೆ.
ರಾಜ್ಯದಲ್ಲೂ ಅವಘಡ
ದೀಪಾವಳಿ ಸಂಭ್ರಮದಲ್ಲಿ ರಾಜ್ಯದಲ್ಲೂ ಪಟಾಕಿ ಅವಘಡಗಳು ನಡೆದಿದ್ದು, ರಾಜಧಾನಿ ಬೆಂಗಳೂರಿನ ಸುತ್ತಮುತ್ತ ೪೨ ಮಂದಿ ಪಟಾಕಿ ಸಿಡಿತದ ವೇಳೆ ಗಾಯಗೊಂಡಿದ್ದಾರೆ.
ಪಟಾಕಿ ಅವಘಡದಿಂದ ಗಾಯಗೊಂಡಿರುವ ೪೨ ಮಂದಿಯ ಪೈಕಿ ೧೭ ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, ಉಳಿದವರು ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸಿಡಿಸುವ ವೇಳೆ ಬಾಲಕನ ಕಣ್ಣಿಗೆ ರಾಕೆಟ್ ಬಡಿದಿದೆ. ಈ ಬಾಲಕನನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಲಗಣ್ಣಿನ ದೃಷ್ಟಿ ಶೇ. ೮೦ ರಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ.
ಬಾಲಕನ ಕಣ್ಣಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಶಸ್ತ್ರಚಿಕಿತ್ಸೆ ನಡೆಸಿದರೂ ದೃಷ್ಟಿ ಸಂಪೂರ್ಣವಾಗಿ ಮರಳುವ ಅನುಮಾನ ವ್ಯಕ್ತವಾಗಿದೆ.
ಬಾಲಕನ ತಂದೆ ಶಿವಶಂಕರ್ ಅವಘಡದ ಬಗ್ಗೆ ಮಾತನಾಡಿ ನಿನ್ನೆ ರಾತ್ರಿ ರಸ್ತೆ ಮೇಲೆ ಆಟವಾಡುತ್ತಿದ್ದಾಗ ಮಗನ ಕಣ್ಣಿಗೆ ರಾಕೆಟ್ ಬಡಿದಿದೆ. ತನ್ನದ್ದಲ್ಲದ ತಪ್ಪಿಗೆ ನನ್ನ ಮಗ ಕಣ್ಣು ಕಳೆದುಕೊಂಡಿದ್ದಾನೆ ಎಂದು ದುಃಖದಿಂದ ಹೇಳಿದರು.
ಪಟಾಕಿ ಅವಘಡಗಳಿಗೆ ಸಂಬಂಧಿಸಿದಂತೆ ನಾರಾಯಣ ನೇತ್ರಾಲಯದಲ್ಲಿ ೨೨ ಪ್ರಕರಣಗಳು, ಮಿಂಟೋ ಆಸ್ಪತ್ರೆಯಲ್ಲಿ ೧೬ ಪ್ರಕರಣಗಳು, ಪ್ರಭಾ ಮತ್ತು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ೨ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ೪೨ ಮಂದಿ ಪಟಾಕಿ ಅವಘಡಗಳಿಂದ ಗಾಯಗೊಂಡಿದ್ದಾರೆ.
ಪಟಾಕಿ ಸಿಡಿಸುವಾಗ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
























