
ಬೆಂಗಳೂರು,ನ.೫-ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಕಾರ್ಯಕರ್ತರು ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಪಿಕ್ ಪಾಕೆಟ್ ಪ್ರತಿಭಟನೆ ನಡೆಸಿದರು.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ
ವಿರೋಧ ಪಕ್ಷದ ನಾಯಕರಾದ ಆರ್,ಆಶೋಕ್ ,ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಸೇರಿದ ನೂರಾರು ಬಿಜೆಪಿ ಮುಖಂಡರು ಕಾರ್ಯಕರ್ತರು ಪಿಕ್ ಪಾಕೆಟ್ ಪ್ರತಿಭಟನೆ ನಡೆಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಆಕ್ರೋಶ ಹೊರಹಾಕಿದರು.
ಚಳವಳಿ ನಡೆಸುತ್ತಿದ್ದ ವಿರೋಧ ಪಕ್ಷದ ನಾಯಕರಾದ ಆರ್,ಆಶೋಕ್ ,ಛಲವಾದಿ ನಾರಾಯಣಸ್ವಾಮಿ,ಶಾಸಕರಾದ ಅರವಿಂದ ಬೆಲ್ಲದ ಮುಖಂಡರಾದ ಹರೀಶ್ ಭಾಸ್ಕರ ರಾವ್ ಸೇರಿ ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನೆ
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಸುಮಾರು ೫,೬೫೦ ಕೋಟಿ ರೂ. ಬಾಕಿ ಹಣ ಪಾವತಿಸಬೇಕಿದೆ. ಈ ಹಣವನ್ನು ಪಾವತಿಸದೆ ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ ಎಂದು ಟೀಕಿಸಿದರು.
ಬಸ್ ಪ್ರಯಾಣ ದರವನ್ನು ಶೇ.೩೦ರಿಂದ ೪೦ರಷ್ಟು ಹೆಚ್ಚಿಸಿರುವುದರಿಂದ ಸಾಮಾನ್ಯ ಜನರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ನಿತ್ಯ ಪ್ರಯಾಣಿಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ದೂರಿದರು.
ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನೂ ಯಾವುದೇ ಸರ್ಕಾರ ಈವರೆಗೆ ಮಾಡಿಲ್ಲ. ಮನಸೋ ಇಚ್ಛೆ ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವಂತೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದ್ದಾರೆ. ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದರೂ, ಜನರ ಬದುಕಲ್ಲಿ ಕತ್ತಲಿನ ಆಚರಣೆಯಾಗಲಿದೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನವಾಗಿದೆ. ಸುಮಾರು ೪೦%ವರೆಗೂ ಟಿಕೆಟ್ ದರ ಏರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಮೆಜೆಸ್ಟಿಕ್ನಿಂದ ಶಿವಾಜಿನಗರಕ್ಕೆ ಬಿಎಂಟಿಸಿಯಲ್ಲಿ ೧೨ ರೂ. ಇದ್ದು, ಈಗ ೧೮ ರೂ. ಆಗಿದೆ. ಮೆಜೆಸ್ಟಿಕ್ನಿಂದ ಯಶವಂತಪುರಕ್ಕೆ ೧೮ ರೂ. ಇದ್ದು, ಈಗ ೨೫ ರೂ. ಆಗಿದೆ. ಮೆಜೆಸ್ಟಿಕ್ನಿಂದ ಬನಶಂಕರಿಗೆ ೧೨ ರೂ., ಅತ್ತಿಬೆಲೆಗೆ ೧೨ ರೂ. ಜಾಸ್ತಿಯಾಗಿದೆ. ನೆಲಮಂಗಲ, ಕಾಡುಗೋಡಿಗೆ ೧೦ ರೂ, ಹೊಸಕೋಟೆಗೆ ೧೨ ರೂ. ಹೆಚ್ಚಳವಾಗಿದೆ. ವೇಗದೂತದಲ್ಲಿ ಬೆಂಗಳೂರು-ಕೋಲಾರಕ್ಕೆ ೧೯ ರೂ. ಹೆಚ್ಚಳ, ಬೆಂಗಳೂರು-ತುಮಕೂರು ೮೧ ರೂ. ಇದ್ದು, ಈಗ ೧೦೦ ರೂ. ಆಗಿದೆ. ಬೆಂಗಳೂರು-ಮಂಡ್ಯ ೧೧೦ರಿಂದ ೧೩೬ ರೂ., ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗುವವರಿಗೆ ಬೆಂಗಳೂರು-ಮೈಸೂರು ಟಿಕೆಟ್ನಲ್ಲಿ ೩೭ ರೂ. ಹೆಚ್ಚಳವಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಹೋಗುವವರಿಗೆ ಬೆಂಗಳೂರು-ಹಾಸನಕ್ಕೆ ೫೧ ರೂ. ಜಾಸ್ತಿಯಾಗಿದೆ. ಚಿಕ್ಕಮಗಳೂರಿಗೆ ದತ್ತ ಪೀಠಕ್ಕೆ ಹೋಗುವವರಿಗೆ ಬೆಂಗಳೂರು-ಚಿಕ್ಕಮಗಳೂರಿಗೆ ೬೮ ರೂ. ಏರಿಕೆಯಾಗಿದೆ. ಹೀಗೆ ಕರಾಳವಾದ ದರಗಳನ್ನು ಹೇರಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಎಂದು ಹೇಳಿ ಈಗ ಹೊರೆ ಹಾಕಿದ್ದಾರೆ ಎಂದರು.
ದರ ಏರಿಕೆ ಮಾಡಲು ಒಂದು ಕಾರಣ ಬೇಕು. ಆದರೆ ಇಲ್ಲಿ ಸಾಲ ಮಾಡಿರುವುದರಿಂದ ದರ ಏರಿಕೆ ಎನ್ನುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಸಾಲದಲ್ಲಿದ್ದೇವೆ ಎಂದಿದ್ದಾರೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಐದು ವರ್ಷ ಲಾಭದಲ್ಲಿತ್ತು. ಆಗ ಸ್ವಂತ ಹಣದಿಂದಲೇ ೧,೧೧೦ ಎಕರೆ ಜಮೀನು ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡಲಾಗಿತ್ತು. ಈಗ ಅದಕ್ಕೆ ೧೦,೦೦೦ ಕೋಟಿ ರೂ. ಮೌಲ್ಯವಿದೆ. ನಾನು ಟಿಟಿಎಂಸಿ ಮಾಡಿದ್ದೆ. ಬಾಡಿಗೆಯಿಂದಲೇ ೪೦-೫೦ ಕೋಟಿ ರೂ. ಬರುತ್ತಿತ್ತು ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿಯೂ ಬಿಜೆಪಿ ಮುಖಂಡರು ಕಾರ್ಯಕರ್ತರು ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು.























