
ಬೆಳಗಾವಿ, ನ.೫-ಕಬ್ಬಿಗೆ ೧ ಸಾವಿರ ರೂ. ಪ್ರೋತ್ಸಾಹಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಬೆಳಗಾವಿ ತಾಲೂಕಿನ ಮುಕ್ತಿಮಠದಿಂದ ಬೆಳಗಾವಿವರೆಗೆ ಪಾದಯಾತ್ರೆಗೆ ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಪಾದಯಾತ್ರೆ ಆರಂಭಕ್ಕೂ ಮುನ್ನವೇ ಮುಕ್ತಿಮಠದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿ ನೂರಾರು ರೈತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯವಲಾಯಿತು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು.
ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ, ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ೧ ಸಾವಿರ ರೂ. ಪ್ರೋತ್ಸಾಹಧನ ಘೋಷಣೆ ಮಾಡಲೇಬೇಕು. ನಮ್ಮನ್ನು ವಶಕ್ಕೆ ಪಡೆದ ತಕ್ಷಣ ಹೋರಾಟ ನಿಲ್ಲುವುದಿಲ್ಲ. ರಸ್ತೆ ಬಂದ್ ಮಾಡುವಂತೆ ರೈತರಿಗೆ ಕರೆ ನೀಡಿದ್ದಾರೆ.
ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಲು ರೈತ ಹೋರಾಟಗಾರರು ನಿರ್ಧರಿಸಿದ್ದರು. ಆದರೆ, ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು.
ರೈತ ಅಸ್ವಸ್ಥ
ಪೊಲೀಸರು ಮುಕ್ತಿ ಮಠದಿಂದ ವಶಕ್ಕೆ ಪಡೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ರೈತನೋರ್ವ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ನನಗೆ ಹಾರ್ಟ್ ಸರ್ಜರಿ ಆಗಿದೆ. ದಯವಿಟ್ಟು ವಾಹನದಲ್ಲಿ ನನ್ನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡರೂ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸ್ಥಳದಲ್ಲಿದ್ದ ರೈತರು ಆರೋಪಿಸಿದ್ದಾರೆ.
ನಿರ್ಜನ ಪ್ರದೇಶದಿಂದ ರೈತನನ್ನು ಇನ್ನುಳಿದ ರೈತರು ಹೊತ್ತುಕೊಂಡು ಹೋಗಿ, ಬಸ್ಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸದೇ ಅರ್ಧಕ್ಕೆ ಬಿಟ್ಟು ಹೋದ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.























