Home ಮುಖಪುಟ ಸುದ್ದಿ ಹಳ್ಳಿಯವನೆಂದು ಹೇಳಿಕೊಳ್ಳಲು ಹೆಮ್ಮೆ

ಹಳ್ಳಿಯವನೆಂದು ಹೇಳಿಕೊಳ್ಳಲು ಹೆಮ್ಮೆ

ಪ್ರಿಯಾಂಕ್‌ಗೆ ಎಚ್‌ಡಿಕೆ ತಿರುಗೇಟು

ಬೆಂಗಳೂರು, ನ. ೫- ತಮ್ಮನ್ನು ಹಳ್ಳಿ ಗುಗ್ಗು ಎಂದು ಟೀಕಿಸಿದ್ದ ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ತಿರುಗೇಟು ನೀಡಿ, ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದಿದ್ದಾರೆ.


ಸ್ಟಿಂಗ್ ಆಪರೇಷನ್ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿದ್ದ ಟೀಕೆಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ಹೆಚ್.ಡಿ. ಕುಮಾರಸ್ವಾಮಿ ಹಳ್ಳಿ ಗುಗ್ಗುನಾ, ತನಿಖೆಯನ್ನು ಲೈವ್ ಸ್ಟ್ರೀಮ್ ಮಾಡಲಿಕ್ಕೆ ಆಗುತ್ತದೆಯೇ ಎಂದೆಲ್ಲಾ ಟೀಕಿಸಿದ್ದರು.


ಗೃಹ ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಕುಮಾರಸ್ವಾಮಿಯವರು ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ತಿರುಗೇಟು ನೀಡಿದ್ದಾರೆ.


ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂಬ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಹೇಳಿಕೆಯನ್ನು ಕುಮಾರಸ್ವಾಮಿ ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆಯವರಿಗೆ ಟಾಂಗ್ ನೀಡಿದ್ದಾರೆ.


ಗೃಹ ಸಚಿವರ ಟೀಕೆ


ಗೃಹ ಸಚಿವ ಪ್ರಿಯಾಂಕ ಖರ್ಗೆ ನಿನ್ನೆ ತಮ್ಮನ್ನು ಗೃಹ ಇಲಾಖೆಗೆ ನಾಲಾಯಕ್ ಎಂದಿದ್ದ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರಾಗಿರುವವರಿಗೆ ಸಾಮಾನ್ಯ ಜ್ಞಾನ ಇಲ್ಲವೇ, ಹಳ್ಳಿ ಗುಗ್ಗು ತರ ಮಾತನಾಡುತ್ತಾರೆ ಎಂದೆಲ್ಲಾ ಟೀಕಿಸಿದ್ದರು.


ಗೃಹಸಚಿವರೇ ನಾವು ಹಳ್ಳಿಯವರು ಏನಿವಾಗ


ಗೃಹ ಸಚಿವರ ಹಳ್ಳಿ ಗುಗ್ಗು ಹೇಳಿಕೆಗೆ ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟರ್ ಹಾಕಿ, ವಾಗ್ದಾಳಿ ನಡೆಸಿದ್ದು, ಗೃಹ ಸಚಿವರೇ ನಾವು ಹಳ್ಳಿಯವರು ಏನಿವಾಗ ಎಂಬ ಪೋಸ್ಟರ್ ಸಮರ ಆರಂಭಿಸಿದೆ.
ಜೆಡಿಎಸ್ ಪಕ್ಷದ ಶಾಸಕರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಜೆಡಿಎಸ್ ಪ್ರತಿಯೊಬ್ಬ ಶಾಸಕರ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದೆ. ಈ ಪೋಸ್ಟರ್ ನಲ್ಲಿ ಪ್ರತಿಯೊಬ್ಬ ಶಾಸಕರು ಗೃಹ ಸಚಿವರೇ ನಾವು ಹಳ್ಳಿಯವರು ಏನಿವಾಗ ಎಂದು ಪ್ರಶ್ನೆ ಮಾಡುವ ಮೂಲಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.


ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಹ ದೆಹಲಿಯಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡದ ಸಂದರ್ಭದಲ್ಲಿ ಅವರ ಹಿಂದೆ ಗೃಹ ಸಚಿವರೇ ಹಳ್ಳಿಯವರೇ ಏನಿವಾಗ ಪೋಸ್ಟರ್ ಎಲ್‌ಇಡಿಯಲ್ಲಿ ಪ್ರದರ್ಶಿಸಲಾಯಿತು.