Home ಸಿನೆಮಾ ಸಾಧನೆಯ ಹಾದಿ ಹಿಡಿದ ಹುಡುಗನ ಕಥೆ

ಸಾಧನೆಯ ಹಾದಿ ಹಿಡಿದ ಹುಡುಗನ ಕಥೆ

‘ಜನರಿಂದ ನಾನು ಮೇಲೆ ಬಂದೆ’ ಟ್ರೇಲರ್ ಬಿಡುಗಡೆ

ನೃತ್ಯವನ್ನೇ ಬದುಕಾಗಿಸಿಕೊಂಡ ಯುವಕರ ಕನಸು, ಹೋರಾಟ ಮತ್ತು ಸಾಧನೆಯ ಕಥೆಯನ್ನು ಹೊತ್ತು ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟ್ರೇಲರ್‌ನ್ನು ಹಿರಿಯ ನಿರ್ದೇಶಕ ಸುನಿಲ್‌ಕುಮಾರ್ ಸಿಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಗಜ’ ಚಿತ್ರದ ನಿರ್ಮಾಪಕ ಸುರೇಶ್‌ಗೌಡ್ರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೆಟ್ಟಿಗೆರೆ ಬೋಳಾರದ ಬಿ. ಹೇಮಾವತಿ ಅವರು ಮಂಜುನಾಥ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವಿಲುಗರಿ ನವೀನ್ ನಿರ್ದೇಶನದ ಈ ಚಿತ್ರದಲ್ಲಿ ಗಂಧರ್ವರಾಜ್ ಶಂಕರ್ ನಾಯಕನಾಗಿ ನಟಿಸಿದ್ದಾರೆ. ಮಂಗಳೂರಿನ ಅಪ್ತಿ ಪಟವರ್ಧನ್ ಹಾಗೂ ಮೈಸೂರಿನ ಕೃತಿಕಾ ದಿವಾಕರ್ ನಾಯಕಿಯರು. ಹಿರಿಯ ನಟರಾದ ವಿನೋದ್‌ರಾಜ್ ಮತ್ತು ಅಭಿಜಿತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೈಲಜಾ ದ್ವಾರಕೀಶ್, ಶಿವಕುಮಾರ್ ಆರಾಧ್ಯ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಚೆನ್ನೈನಲ್ಲಿ ನಡೆದ ಘಟನೆ ಹಾಗೂ ಮಂಗಳೂರಿನಲ್ಲಿ ಕಂಡ ಸನ್ನಿವೇಶಗಳಿಂದ ಪ್ರೇರಣೆ ಪಡೆದು ನಿರ್ದೇಶಕರು ಕಥೆ ರೂಪಿಸಿದ್ದಾರೆ. ನೃತ್ಯವನ್ನು ಕೇಂದ್ರವಾಗಿಟ್ಟುಕೊಂಡಿರುವ ಕಥೆಯಲ್ಲಿ, ಸ್ಲಂನಲ್ಲಿ ಬದುಕುತ್ತಾ ನೃತ್ಯಪಟುವಾಗುವ ಕನಸು ಕಾಣುವ ಹುಡುಗ ಮತ್ತು ವಿದ್ಯಾಭ್ಯಾಸವನ್ನು ಬದಿಗಿಟ್ಟು ಡ್ಯಾನ್ಸ್‌ನ್ನೇ ಜಗತ್ತೆಂದು ಭಾವಿಸುವ ವಿದ್ಯಾರ್ಥಿಯ ಬದುಕು ಒಂದೆಡೆ ಸೇರುತ್ತದೆ. ಒಂದೇ ಗುರಿ ಹೊಂದಿರುವ ಈ ಇಬ್ಬರಿಗೆ ಜನರಿಂದ ಎಂತಹ ಪ್ರೋತ್ಸಾಹ ಸಿಗುತ್ತದೆ, ಅವರ ಕನಸು ನನಸಾಗುತ್ತದೆಯೇ ಎಂಬುದನ್ನು ಹಾಸ್ಯ ಮತ್ತು ಕುತೂಹಲದೊಂದಿಗೆ ಚಿತ್ರಿಸಲಾಗಿದೆ.

ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದು, ಎರಡು ಹಾಡುಗಳಿಗೂ ಸಾಹಿತ್ಯ ಬರೆದಿದ್ದಾರೆ. ಪ್ರಣವ್ ಸತೀಶ್ ಸಂಗೀತ, ಟಿ.ಆರ್. ಗೌತಮ್ ಛಾಯಾಗ್ರಹಣ ಮತ್ತು ಸಂಕಲನ, ಪೃಥ್ವಿರಾಜ್ ಸಂಕಿ ಹಾಗೂ ಭುವನ್ ಎಂ.ಎಸ್. ಸಾಹಿತ್ಯ, ಚಾಮರಾಜ್ ಮಾಸ್ಟರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ಬೆಂಗಳೂರು ಹಾಗೂ ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ನವೆಂಬರ್ ಎರಡನೇ ವಾರದಲ್ಲಿ ತೆರೆಗೆ ಬರಲಿದೆ.